ರಂಗನಟ, ಕವಿ, ಹಾಡುಗಾರ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ನಿಧನ

Update: 2018-09-22 16:49 GMT

ಪುತ್ತೂರು, ಸೆ. 22: ರಂಗನಟ, ಹಿರಿಯ ಗಮಕ ಕವಿ, ಹಾಡುಗಾರ ಪುತ್ತೂರು ನಗರದ ಹೊರವಲಯದ ಸಾಲ್ಮರ ನಿವಾಸಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ(84) ಶನಿವಾರ ಸ್ವಗೃಹದಲ್ಲಿ ನಿಧನರಾದರು. 

ಸುಮಾರು 60 ವರ್ಷಗಳ ಕಾಲ ವಿವಿಧ ಶಾಲಾ ಕಾಲೇಜುಗಳಿಗೆ ತೆರಳಿ 16ಸಾವಿರಕ್ಕೂ ಅಧಿಕ ಹಾಡುಗಾರಿಕಾ ಕಾರ್ಯಕ್ರಮವನ್ನು ನೀಡಿರುವ ಬೆಂಡರವಾಡಿ ಅವರು  `ಸುಬ್ಬಜ್ಜ' ಎಂದೇ ಖ್ಯಾತರಾಗಿದ್ದರು. 

1960ರಲ್ಲಿ ಪುತ್ತೂರಿಗೆ ಬಂದ ಬೆಂಡರವಾಡಿಯವರು ಬಳಿಕ ನಿರಂತರವಾಗಿ ಹೆಸರಾಂತ ಸಾಹಿತಿಗಳಾದ ಕೈಲಾಸಂ, ರಾಜರತ್ನಂ, ಕುವೆಂಪು, ಬೇಂದ್ರೆ ಮೊದಲಾದವರ ಹಾಡುಗಳನ್ನು ಶಾಲೆ, ಕಾಲೇಜ್‍ಗಳಿಗೆ ತೆರಳಿ ಹಾಡುತ್ತಾ, ಅದನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕೆಲಸವನ್ನು ಮಾಡಿದ್ದರು 
ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಹಾಡುಗಳ ಕಿರುಹೊತ್ತಿಗೆಗಳನ್ನು ಹೊರತಂದಿದ್ದರು. ಶಾಲೆ ದೇವರ ಮಂದಿರ, ವಿಶ್ವ ಭಾರತಿ, ಸಕ್ಕರೆ ಗೊಂಬೆ, ಅಪ್ಪಕಜ್ಜಾಯ, ಚಂದಮಾಮ, ಪುಟ್ಟನ ಹಾಡು, ಪೀ ಪೀ ಹಾಡು, ತಾಯಿ ದೇವರು, ವಿದ್ಯಾ ಸರಸ್ವತಿ, ಗುಡ್ಡು ಪುಟಾಣಿ, ಗುರುವಂದನೆ, ಬತ್ತಾಸು, ಕಿಂದರಿ ಜೋಗಿ, ಕೋಲಾಟದ ಹಾಡು, ಪಾಪುನ ಪೀಪಿ, ಸುವ್ವಾಲೆ, ಚಂದನ, ಶ್ರೀಗಂಧ ಮಕ್ಕಳ ಗೀತೆಯ ಕಿರುಹೊತ್ತಿಗೆಯನ್ನು ಪ್ರಕಟಿಸಿದ್ದರು. 

ಆಕಾಶವಾಣಿಯಲ್ಲಿ `ಎ; ಗ್ರೇಡ್ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದ ಬೆಂಡರವಾಡಿಯವರಿಗೆ ದೇರಾಜೆ ಪ್ರಶಸ್ತಿ, ಅಳಿಕೆ ಬಾಲಕೃಷ್ಣ ಶೆಟಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ಲಭಿಸಿತ್ತು. ಪುತ್ತೂರು ತಾಲೂಕು 2ನೆಯ ಮಕ್ಕಳ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಅವರಿಗೆ ಲಭಿಸಿತ್ತು. 

ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News