ತಣ್ಣೀರುಬಾವಿ: ಮರಳು ಸಹಿತ ಜೆಸಿಬಿ ವಶ; 6 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2018-09-22 17:08 GMT

ಮಂಗಳೂರು, ಸೆ. 22: ನಗರ ಹೊರವಲಯದ ತಣ್ಣೀರುಬಾವಿ ಸಮೀಪದ ನಾಯರ್‌ಕುದ್ರು ಎಂಬಲ್ಲಿ ಪ್ರತ್ಯೇಕ 2 ಕಡೆಗಳಲ್ಲಿ ದಾಸ್ತಾನಿರಿಸಿದ 65 ಲೋಡ್ ಮರಳು ಸಹಿತ 2 ಜೆಸಿಬಿಯನ್ನು ಪಣಂಬೂರು ಪೊಲೀಸರು ಶನಿವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. 4.5 ಲಕ್ಷ ರೂ. ಮೌಲ್ಯದ ಮರಳು ಮತ್ತು ಜೆಸಿಬಿಯ ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮರಳುಗಾರಿಕೆ, ಮರಳು ಸಾಗಾಟ ನಿಷೇಧವಿದ್ದರೂ ಕೂಡಾ ತಣ್ಣೀರುಬಾವಿ ಸುತ್ತಮುತ್ತಲಿನ ಖಾಸಗಿ ಸ್ಥಳದಲ್ಲಿ ಮರಳು ದಾಸ್ತಾನಿರಿಸಿ ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ.

ಸ್ಥಳೀಯರಾದ ಎಲಿಯಾಸ್ ಡಿಲಿಮಾ, ಶ್ರೀಕಾಂತ್ ಮತ್ತು ಜುನೈದ್ ಹಾಗೂ ವಿಲ್ಫಿ ಕುವೆಲ್ಲೋ, ಡಾರ್ವಿನ್ ಕುವೆಲ್ಲೋ ಮತ್ತು ನವೀನ್ ಎಂಬವರು ಪ್ರತ್ಯೇಕವಾಗಿ ಎರಡು ಕಡೆ ಅಕ್ರಮ ಮರಳು ದಾಸ್ತಾನಿಟ್ಟಿದ್ದರು ಎನ್ನಲಾಗಿದೆ. ಮುಂದಿನ ಸೂಕ್ತ ಕ್ರಮಕ್ಕಾಗಿ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ-ನಿರ್ದೇಶಕರ ಸುಪರ್ದಿಗೆ ಒಪ್ಪಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿ ಉಮಾಪ್ರಶಾಂತ್ ಮಾರ್ಗದರ್ಶನದಂತೆ ಉತ್ತರ ಎಸಿಪಿ ರಾಜೇಂದ್ರ ಡಿ. ಎಸ್. ನೇತೃತ್ವದಲ್ಲಿ ಪಣಂಬೂರು ಠಾಣಾ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ ಮತ್ತು ಪಣಂಬೂರು ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News