ಮಂಗಳೂರು ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ

Update: 2018-09-23 11:43 GMT

ಮಂಗಳೂರು, ಸೆ.23: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಈ ಬಾರಿಯ ಮಂಗಳೂರು ದಸರಾವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.

ರವಿವಾರ ಶ್ರೀಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 10ರಿಂದ 19ರವರೆಗೆ ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯಲಿದೆ. ಇದರ ಉದ್ಘಾಟನೆಗೆ ತಾನು ಆಗಮಿಸುವುದಾಗಿ ಕುಮಾರಸ್ವಾಮಿ ಶನಿವಾರ ೆನ್ ಮೂಲಕ ಖಚಿತಪಡಿಸಿದ್ದಾರೆ. ಉದ್ಘಾಟನೆ ದಿನಾಂಕವನ್ನು ಇನ್ನಷ್ಟೇ ನಿಗದಿಗೊಳಿಸಬೇಕಿದೆ ಎಂದರು.

ಮುಖ್ಯಮಂತ್ರಿ ದಸರಾ ಉದ್ಘಾಟನೆಗೆ ಒಪ್ಪಿರುವುದು ಸಂತಸ ನೀಡಿದೆ. ದೇವೇಗೌಡರೂ ದಸರಾ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದರೆ ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರೆಯುವ ಬಗ್ಗೆ ಯೋಚನೆ ಮಾಡಿಲ್ಲ. ಯಾರೂ ಬಾರದಿದ್ದರೆ ನಾನೇ ದಸರಾ ಉದ್ಘಾಟಿಸುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಪೂಜಾರಿ ಪ್ರತಿಕ್ರಿಯಿಸಿದರು.

ಮಂಗಳೂರು ದಸರಾ ಈ ಬಾರಿಯೂ ವೈಭವದಿಂದ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆ ಆರಂಭವಾಗಿದೆ. ವಿವಿಧ ತಂಡಗಳು ಕಾರ್ಯಕ್ರಮ ನೀಡಲಿವೆ. ಶೋಭಾಯಾತ್ರೆಯಲ್ಲೂ ವಿವಿಧ ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ದೇಶ ವಿದೇಶದಿಂದ ಜನರು ಆಗಮಿಸಲಿದ್ದಾರೆ ಎಂದು ಪೂಜಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್, ಕಾರ್ಯದರ್ಶಿ ಮಾಧವ ಸುವರ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ.ಬಿ.ಜಿ. ಸುವರ್ಣ, ರಾಧಾಕೃಷ್ಣ, ಡಾ. ಅನಸೂಯಾ, ದೇವೇಂದ್ರ ಪೂಜಾರಿ, ಶೇಖರ ಪೂಜಾರಿ, ಜಯವಿಕ್ರಮ್, ಲೀಲಾಕ್ಷ ಕರ್ಕೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News