ಉಡುಪಿ: ಹೆಚ್ಚ್ಲು ಮದ್ಯ ಖರೀದಿಗೆ ಅಬಕಾರಿ ಇಲಾಖೆ ಒತ್ತಡ: ಸಂಘದಿಂದ ಆರೋಪ

Update: 2018-09-23 13:20 GMT

ಉಡುಪಿ, ಸೆ.23: ಕಳೆದ ಸುಮಾರು 2 ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಮದ್ಯ ಖರೀದಿಸುವಂತೆ ಮದ್ಯ ಮಾರಾಟ ಸನ್ನದುದಾರರಿಗೆ ಅಬಕಾರಿ ಇಲಾಖೆ ಒತ್ತಡ ಹೇರುತ್ತಿದೆ. ಆದರೆ ಬಿಯರ್ ಖರೀದಿಯನ್ನು ನಿರಾಕರಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಹೇಳಿಕೆಯಲ್ಲಿ ತಿಳಿಸಿದೆ.

ಮದ್ಯವನ್ನು ರೇಷನ್ ರೀತಿಯಲ್ಲಿ ಅಂದರೆ 100 ಪೆಟ್ಟಿಗೆ ಮದ್ಯವನ್ನು ಖರೀದಿ ಮಾಡಿದರೆ 40ರಿಂದ 50 ಪೆಟ್ಟಿಗೆ ಬಿಯರ್ ನೀಡಲಾಗುತ್ತಿದೆ. ವಾಸ್ತವದಲ್ಲಿ ಕೆಲವೊಮ್ಮೆ ಮದ್ಯ ಹೆಚ್ಚು ಮಾರಾಟವಾದರೆ ಕೆಲವೊಮ್ಮೆ ಬಿಯರ್ ಮಾರಾಟವಾಗುತ್ತದೆ. ಮದ್ಯದ ದರಗಳು ಜಾಸ್ತಿ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಗ್ರಾಹಕ ಕಡಿಮೆ ದರದ ಬಿಯರ್‌ನ್ನು ಸೇವಿಸಲು ಇಚ್ಛೆ ಪಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಲಾಖೆಯವರ ಒತ್ತಡದಿಂದ ಆಗಸ್ಟ್ ತಿಂಗಳಲ್ಲಿ ಬಿಯರ್ ಖರೀದಿ ಕಡಿಮೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಯರ್ ಖರೀದಿಗೆ ಇನ್ನೂ ಹೆಚ್ಚಿನ ಕಡಿವಾಣ ಹಾಕಲಾಗುತ್ತಿದೆ ಎಂದು ಸಂಘ ದೂರಿದೆ. ಕಳೆದ ಎಪ್ರಿಲ್ ತಿಂಗಳಿನಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟಗಾರರ ಆರ್ಥಿಕ ಪರಿಸ್ಥಿತಿ ತುಂಬಾ ವ್ಯತ್ಯಯವಾಗಿದೆ. ವಿಧಾನಸಭಾ ಚುನಾವಣೆ, ಪೌರಾಡಳಿತ ಚುನಾವಣೆ, ನೀತಿ ಸಂಹಿತೆ, ಬಂದ್ ಆಚರಣೆಗಳ ಹಿನ್ನೆಲೆಯಲ್ಲಿ ಸನ್ನದುಗಳು ಅಮಾನತುಗೊಂಡಿರುವುದು ಇದಕ್ಕೆ ಕಾರಣ ಎಂದು ಸಂಘ ತಿಳಿಸಿದೆ.

ಈ ಎಲ್ಲಾ ವಿಷಯಗಳನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಅಬಕಾರಿ ಆಯುಕ್ತರ, ಅಪರ ಅಬಕಾರಿ ಆಯುಕ್ತರು ಹಾಗೂ ಉಡುಪಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಿಯರ್ ಖರೀದಿಯನ್ನು ನಿರ್ಬಂಧಿಸದಂತೆ ಹಾಗೂ ವಾಸ್ತವಕ್ಕಿಂತ ಅಧಿಕ ಮದ್ಯ ಖರೀದಿಗೆ ಒತ್ತಾಯಿಸದಂತೆ ಮನವಿ ಮಾಡಲಾಗಿದೆ ಎಂದು ಸಂಘದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂದು ಜಿಲ್ಲಾ ಸನ್ನದುದಾರರ ತುರ್ತು ಸಭೆಯನ್ನು ನಡೆಸಿ ಈ ಬಗ್ಗೆ ಚರ್ಚಿಸಲಾಗಿದೆ. ಮಂಗಳವಾರದ ಒಳಗೆ ಪರಿಸ್ಥಿತಿ ಸರಿಯಾಗುವ ಭರವಸೆ ಇದ್ದು, ಪರಿಹಾರ ಕಾಣದೇ ಇದ್ದಲ್ಲಿ ಸೂಕ್ತ ಹೋರಾಟವನ್ನು ಜಿಲ್ಲೆಯಲ್ಲಿ ಹಾಗೂ ನ್ಯಾಯಾಲಯದಲ್ಲಿ ನಡೆಸುವ ಬಗ್ಗೆ ಸರ್ವಾನುಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಗೋವಿಂದರಾಜ ಹೆಗ್ಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News