ಗೋಪಾಲ ಶೆಟ್ಟರ ‘ದೇವಯಾನಿ-ಶರ್ಮಿಷ್ಠೆ’ ಪರಿಷ್ಕೃತ ಆವೃತಿ ಬಿಡುಗಡೆ

Update: 2018-09-23 14:28 GMT


ಉಡುಪಿ, ಸೆ. 23: ಕನ್ನಡದ ಕವಿ, ಸಾಹಿತಿ, ಚಿಂತಕ ಗೋಪಾಲ ಬಿ. ಶೆಟ್ಟಿ ಅವರ ‘ದೇವಯಾನಿ-ಶರ್ಮಿಷ್ಠೆ’ ಕಾವ್ಯ ನಾಟಕದ ಎರಡನೇ ಪರಿಷ್ಕೃತ ಆವೃತ್ತಿ ರವಿವಾರ ಸಂಜೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಂಡಿತು.
 
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಉಡುಪಿಯ ಖ್ಯಾತ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ, ತಮ್ಮ ಆದರ್ಶಗಳಿಗೆ ಜೀವನವನ್ನು ಮುಡಿಪಾಗಿಟ್ಟಿರುವ ಗೋಪಾಲ ಬಿ.ಶೆಟ್ಟಿ ಅವರ ‘ದೇವಯಾನಿ-ಶರ್ಮಿಷ್ಠೆ’ ಕೃತಿ ನಮ್ಮ ಹೃದಯ ಮತ್ತು ಮನಸ್ಸನ್ನು ತೆರೆಸುತ್ತದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಮಹತ್ವದ ಕೊಡುಗೆ ಎಂದರು.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಾಂಸ್ಕೃತಿಕ ಸ್ಪಂದನ - ಸಹಕಾರದ ಸಾಹಿತ್ಯಕ-ಕಲಾ ಕಾರ್ಯಕ್ರಮದಂಗವಾಗಿ ಇಂದ್ರಾಳಿಯ ನೂತನ ಪಬ್ಲಿಕೇಷನ್‌ನ ಪ್ರಕಾಶನದ ಈ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮಾತನಾಡಿ, ಸ್ತ್ರೀಯರಲ್ಲಿ ಈರ್ಷ್ಯೆ ಹುಟ್ಟಿದಾಗ ಗೆಳತಿಯರು ಕೂಡ ಹೇಗೆ ನಡೆದು ಕೊಳ್ಳಬಹುದು ಎಂಬುದನ್ನು ತಿಳಿಯಲು ದೇವಯಾನಿ-ಶರ್ಮಿಷ್ಠೆ ಕೃತಿಯನ್ನು ಓದಬೇಕು ಎಂದರು.

ಕೃತಿ ಪರಿಚಯ ಮಾಡಿದ ಕಲಾವಿದೆ, ಕವಯತ್ರಿ ಪೂರ್ಣಿಮಾ ಸುರೇಶ್ ಮಾತನಾಡಿ, ‘ದೇವಯಾನಿ-ಶರ್ಮಿಷ್ಠೆ’ ಕೃತಿ ದಬ್ಬಾಳಿಕೆಗೆ ಒಳಗಾಗುವ ಹೆಣ್ಣು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುವ ಪಾತ್ರಗಳನ್ನು ಕಣ್ಣ ಮುಂದಿಡುತ್ತದೆ. ಕೃತಿಯಲ್ಲಿ ವರ್ಗ ಸಂಘರ್ಷವನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಪ್ರೀತಿ ಮೋಹವಾದಾಗ ಬೀರುವ ದುಷ್ಪರಿಣಾಮವನ್ನು ತಿಳಿಸುತ್ತದೆ. ಸರಳ, ಸುಂದರ ಭಾಷೆಯಲ್ಲಿ ಮೂಡಿಬಂದಿರುವ ಕೃತಿ ಪುರುಷ ಕೇಂದ್ರಿತ ಸಮಾಜದಲ್ಲಿ ಹೆಣ್ಣಿನ ತಳಮಳ, ಸಂಘರ್ಷವನ್ನು ಭಾವನಾತ್ಮಕವಾಗಿ ನಿರೂಪಿಸುತ್ತದೆ ಎಂದರು.

ಖ್ಯಾತ ಸಾಹಿತಿ, ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ.ವಿಜಯ್, ರಮಾ ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಆಂಶುಮಾಲಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಸನ್ನಿಧಿ ಮತ್ತು ಸಮಾಶ್ರಿ ಆಡ್ಡೂರ್ ಇವರಿಂದ ರಂಗ ಗಾಯನ ಹಾಗೂ ಉಡುಪಿ ಸಮೂಹ ಕಲಾವಿದರಿಂದ ಕಾವ್ಯನಾಟಕದ ಪ್ರಯೋಗ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News