ಉಡುಪಿ: ವಿಶ್ವ ಹೃದಯ ದಿನಾಚರಣೆ; ಜಾಗೃತಿ ಜಾಥಾ

Update: 2018-09-23 14:32 GMT

ಉಡುಪಿ, ಸೆ.23: ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ‘ನಿಮ್ಮ ನಡೆ ಹೃದಯದೆಡೆ’ ಎಂಬ ಬೃಹತ್ ಜನ ಜಾಗೃತಿ ಕಾಲ್ನಡಿಗೆ ಜಾಥಾ ಹಾಗೂ ಹೃದ್ರೋಗ ಜಾಗೃತಿ ಕಾರ್ಯಕ್ರಮ ರವಿವಾರ ನಗರದಲ್ಲಿ ನಡೆಯಿತು.

ಜಾಥಾಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ಚಾಲನೆ ನೀಡುವ ಮುನ್ನ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯೋಗ ಎಷ್ಟು ಮುಖ್ಯವೋ ಶರೀರದ ಕ್ಷೇಮವೂ ಅಷ್ಟೇ ಮುಖ್ಯ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಸಮಾಜದಲ್ಲಿ ಅರಿವು ಮೂಡಿಸಲು ಸಾಧ್ಯ ಎಂದರು.

ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ದೇಹ ಸಂಪತ್ತು ಸರ್ವಶ್ರೇಷ್ಠವಾಗಿದ್ದು, ಅದನ್ನು ಯೋಗ, ಇನ್ನಿತರ ಸಾಧನೆಗಳ ಮೂಲ ಆರೋಗ್ಯವಾಗಿಡಲು ಶ್ರಮಿಸಬೇಕು. ಈ ಸತ್ಯವನ್ನು ಬೆಳೆಯುವ ಯುವ ಜನಾಂಗಕ್ಕೆ ತಿಳಿಹೇಳಬೇಕು ಎಂದರು.

ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ, ನಗರೀಕರಣ ಹಾಗೂ ಆಧುನಿಕ ಸೌಲಭ್ಯಗಳಿಂದಾಗಿ ಮಾನವರಲ್ಲಿ ಶೇ.50ರಷ್ಟು ಮಂದಿ ಇಂದು ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಹೃದ್ರೋಗ ತರುವ ಎಲ್ಲಾ ವಿಚಾರಗಳ ಬಗ್ಗೆ ಯುವ ಜನತೆಗೆ ಅರಿವು ಮೂಡಿಸುವ ಅಗತ್ಯ ಇಂದು ಹಿಂದೆಂದಿಗಿಂತ ಇಂದು ಹೆಚ್ಚಿದೆ ಎಂದರು.

ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಯಶ್ಪಾಲ ಸುವರ್ಣ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಉದ್ಯಮಿಗಳಾದ ಮನೋಹರ ಶೆಟ್ಟಿ, ಭುವನೇಂದ್ರ ಕಿದಿಯೂರು, ವಕೀಲ ಪ್ರದೀಪ್ ಕುಮಾರ್ ಹಾಗೂ ಆದರ್ಶ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಶ್ರೀಕಾಂತ್ ಕೆ. ಸೇರಿದಂತೆ ವೈದ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಡೆದ ಜಾಥಾದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು, ಆದರ್ಶ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡರು. ಜಾಥಾ ಉಡುಪಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆದರ್ಶ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು.

ಜಾಥದಲ್ಲಿ ಹೃದಯ ಕಾಯಿಲೆ ಬಗ್ಗೆ ಹಾಗೂ ಧೂಮಪಾನ, ಮದ್ಯಪಾನ, ಅಮಲು ಪದಾರ್ಥ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ, ವಿವಿಧ ಲಕಗಳ ಪ್ರದರ್ಶನ ನಡೆಯಿತು.

ಬಳಿಕ ಆದರ್ಶ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಶ್ರೀಕಾಂತ್ ಕೆ. ಹೃದ್ರೋಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News