ಕಂಬಳ ನೀತಿ, ನಿಯಮಗಳ ಚೌಕಟ್ಟಿನಲ್ಲಿ ನಡೆಯಲಿ: ನ್ಯಾಯವಾದಿ ರಾಜಶೇಖರ್

Update: 2018-09-23 14:37 GMT

ಮೂಡುಬಿದಿರೆ, ಸೆ.23: ಕಾನೂನು ಮಾನ್ಯತೆ ಸಿಕ್ಕಿರುವ ಕಂಬಳಕ್ಕೀಗ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ಆದರೆ ಈ ಬಾರಿ 'ಪೇಟಾ'ದವರು ಸರ್ಕಾರದ ಸುಗ್ರೀವಾಜ್ಞೆಯನ್ನೇ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮತ್ತೆ ಮರು ಅರ್ಜಿ ಸಲ್ಲಿಸಿದ್ದಾರೆ. ಇದೀಗ ಕಂಬಳಕ್ಕೆ ಅಡೆತಡೆ ಉಂಟಾಗದಂತೆ ಅದಕ್ಕೆ ಆಕ್ಷೇಪ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಹೈಕೋರ್ಟ್‌ನಲ್ಲಿ ಕಂಬಳ ಪರ ವಾದಿಸುತ್ತಿರುವ ನ್ಯಾಯವಾದಿ ರಾಜಶೇಖರ್ ಹೇಳಿದರು. 

ಜಿಲ್ಲಾ ಕಂಬಳ ಸಮಿತಿ ವತಿಯಿಂದ ಇಲ್ಲಿನ ಸ್ವರ್ಣ ಮಂದಿರದಲ್ಲಿ ರವಿವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ 'ಪೇಟಾ'ದವರು ಕಂಬಳ ಸಮಿತಿಯನ್ನು ಪ್ರತಿವಾದಿಗಳನ್ನಾಗಿಸದೆ ಕಾನೂನು ಜಾರಿಗೆ ತಂದ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನೇ ಪ್ರತಿವಾದಿಗಳನ್ನಾಗಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯ ಹೈಕೋರ್ಟ್ ಜನರಲ್ ಹಾಗೂ ಕೇಂದ್ರದ ಸಾಲಿಸಿಟರ್ ಜನರಲ್ ಅವರು ಕಂಬಳ ಪರ ವಾದಿಸುವಂತೆ ಪ್ರಯತ್ನ ನಡೆಸಬೇಕು. ಈ ಅರ್ಜಿ ಇತ್ಯರ್ಥವಾಗುವವರೆಗೆ ಕಂಬಳ ಕುರಿತು ರೂಪಿಸಿದ ನೀತಿ ನಿಯಮಗಳನ್ನು ಎಲ್ಲ ಕಂಬಳ ಸಮಿತಿಯವರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಕಸ್ಟಮ್ಸ್ ನ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಆಯಾಯ ಸಮಿತಿಯವರು ಕಂಬಳವನ್ನು ಕಾನೂನು ಚೌಕಟ್ಟಿನಲ್ಲಿ ನಡೆಸಲು ಗರಿಷ್ಠ ಆದ್ಯತೆ ನೀಡಬೇಕು. ಕಂಬಳಕ್ಕೆ ಅರ್ಹವಲ್ಲದ ಕೋಣಗಳನ್ನು ತರಲೇಬಾರದು. ಪದಕ ಗಳಿಸುವ ಇರಾದೆಯನ್ನು ಮಾತ್ರ ಇರಿಸಿಕೊಳ್ಳದೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಾಂಪ್ರದಾಯಿಕ ರೀತಿಯಲ್ಲಿ ಕಂಬಳ ನಡೆಸಬೇಕು ಎಂದು ಹೇಳಿದರು

ಜಿಲ್ಲಾ ಕಂಬಳ ಸಮಿತಿಯ ಗೌರವ ಸಲಹೆಗಾರ ಗುಣಪಾಲ ಕದಂಬ ಮಾತನಾಡಿ, ಕಂಬಳ ಕರೆಯಲ್ಲಿ ಓಡಲು ಅರ್ಹವಾದ ಕೋಣಗಳನ್ನು ಮಾತ್ರ ಬಳಕೆ ಮಾಡಬೇಕು. ಈ ಕುರಿತು ತಜ್ಞರಿಂದ ವೈಜ್ಞಾನಿಕ ವರದಿಯನ್ನು ಸರ್ಕಾರ ರಚಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕಬೇಕು ಎಂದು ಸಲಹೆ ನೀಡಿದರು.

ಮೂಡುಬಿದಿರೆ ಕಂಬಳ ಸಮಿತಿಯ ನೂತನ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಮಾಜಿ ಶಾಸಕ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಮಾನಾಥ ಕೋಟ್ಯಾನ್ ಮಾತನಾಡಿ, ಕಂಬಳದ ಬಗ್ಗೆ ಕೆಚ್ಚಿನ ಅನುಭವ ಇಲ್ಲ. ಹಿರಿಯರು ಮತ್ತು ಅಭಯಚಂದ್ರ ಜೈನ್ ಅವರ ಸಲಹೆ ಮಾರ್ಗದರ್ಶನ ಪಡೆದು ಕಂಬಳ ಅಭಿಮಾನಿಗಳ ಸಹಕಾರದಿಂದ ಈ ಬಾರಿಯ ಕಂಬಳ ನಡೆಸುವುದಾಗಿ ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ನೂತನ ಶಾಸಕರಿಗೆ ಕಂಬಳ ನಡೆಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಭಾಸ್ಕರ ಎಸ್. ಕೋಟ್ಯಾನ್, ಬಾರ್ಕೂರು ಶಾಂತಾರಾಮ ಶೆಟ್ಟಿ, ಡಾ.ಜೀವಂದರ್ ಬಲ್ಲಾಳ್, ಮತ್ತಿತರರು ಮಾತನಾಡಿ ಸಲಹೆಗಳನ್ನು ನೀಡಿದರು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕೋಶಾಧ್ಯಕ್ಷ ಸುರೇಶ್ ಕೆ. ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಡ್ತೂರು ರಾಜೀವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನವರಾತ್ರಿಯ ಸಂದರ್ಭದಲ್ಲಿ ಮತ್ತೆ ಸಭೆ ನಡೆಸಿ ಚರ್ಚಿಸಿ ಕಂಬಳ ವೇಳಾ ಪಟ್ಟಿಯನ್ನು ಸಿದ್ಧಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News