ಯುವತಿಯರಿಗೆ ಲೈಂಗಿಕ ದೌರ್ಜನ್ಯ ಆರೋಪ: ಉದ್ಯಮಿ ಪೊಲೀಸ್ ವಶಕ್ಕೆ

Update: 2018-09-23 16:28 GMT

ಮಂಗಳೂರು, ಸೆ.23: ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡದ್ದಲ್ಲದೆ ಅದನ್ನು ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಆರೋಪದ ಮೇಲೆ ಉದ್ಯಮಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಮೂಲತಃ ಕೇರಳ ನಿವಾಸಿ, ಸದ್ಯ ನಗರದ ವ್ಯಾಸನಗರದಲ್ಲಿ ವಾಸಿಸುತ್ತಿರುವ ಉದ್ಯಮಿ ಶಶಿರಾಜ್ (45) ಪೊಲೀಸರ ವಶದಲ್ಲಿರುವ ಆರೋಪಿ. ಈತ ಅಮಾಯಕ ಯುವತಿಯರು, ಹೆಂಗಸರೊಂದಿಗೆ ಸ್ನೇಹ ಬೆಳೆಸಿಕೊಂಡು ಉಪಾಯದಿಂದ ಅವರನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನಲ್ಲದೆ ಅದನ್ನು ವಿಡಿಯೋ ರೆಕಾರ್ಡಿಂಗ್ ಕೂಡಾ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಾಮಾಜಿಕ ಕಾರ್ಯಕರ್ತೆಯೊಬ್ಬರು ರವಿವಾರ ಆತನನ್ನು ಉಪಾಯದಿಂದ ಬಲೆಗೆ ಕೆಡವಿ ಬರ್ಕೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಹೇಳುವ ಪ್ರಕಾರ, ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ತನ್ನ ಬಳಿ ಬಂದು ಒಂದು ಚಿಪ್ ತನಗೆ ನೀಡಿ ‘ವ್ಯಕ್ತಿಯೊಬ್ಬ ಹೆಣ್ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ, ಆತನನ್ನು ಪೊಲೀಸರಿಗೆ ಒಪ್ಪಿಸಿ’ ಎಂದು ಮನವಿ ಮಾಡಿ ಆತನ ಮೊಬೈಲ್ ನಂಬರ್ ನೀಡಿದ್ದಳು. ಅದರಂತೆ ತಾನು ಆತನೊಂದಿಗೆ ಮಾತನಾಡಿ ಬಲೆಗೆ ಕೆಡವಿದೆ ಎಂದಿದ್ದಾರೆ.

ಮೊದಲಿಗೆ ಕದ್ರಿ ಠಾಣೆಯಲ್ಲಿ ಆರೋಪಿಯನ್ನು ಇರಿಸಲಾಗಿತ್ತು. ಘಟನೆ ನಡೆದ ಸ್ಥಳವು ಬರ್ಕೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಬರ್ಕೆ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆಯ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಬರ್ಕೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News