ತಮಿಳುನಾಡಿನಿಂದ ಗಂಜಿಮಠಕ್ಕೆ ಹೊರಟ ಸಮೀರ್ ಮೃತದೇಹ

Update: 2018-09-24 13:00 GMT

ಮಂಗಳೂರು,ಸೆ.24:ತಮಿಳ್ನಾಡಿನ ಕೇನಿ ಜಿಲ್ಲೆಯ ಕೃಷ್ಣಗಿರಿ ಸಮೀಪದ ದೇವತಾನಪಟ್ಟಿ ಎಂಬಲ್ಲಿ ಪತ್ತೆಯಾದ ಬಡಗ ಉಳಿಪಾಡಿ ಗ್ರಾಮದ ಗಂಜಿಮಠ ಸಮೀಪದ ಜೆ.ಎಂ.ರಸ್ತೆಯ ನಿವಾಸಿ ಮುಹಮ್ಮದ್ ಸಮೀರ್ (35)ರ ಮೃತದೇಹವನ್ನು ತವರೂರಿಗೆ ವಿಶೇಷ ಆ್ಯಂಬುಲೆನ್ಸ್ ಮೂಲಕ ತರಲಾಗುತ್ತಿದೆ. ಸೋಮವಾರ ಸಂಜೆ ಹೊರಟ ಆ್ಯಂಬುನೆಲ್ಸ್ ಮಂಗಳವಾರ ಮುಂಜಾನೆ ಗಂಜಿಮಠ ತಲುಪಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸೆ.13ರಂದು ಮುಹಮ್ಮದ್ ಸಮೀರ್ ತನ್ನ ಪತ್ನಿ ಫಿರ್ದೌಸ್ ಮತ್ತು ಮೂರು ತಿಂಗಳ ಹೆಣ್ಣು ಮಗುವಿನೊಂದಿಗೆ ತನ್ನ ಮನೆಯಿಂದ ಬೆಂಗಳೂರಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹೋಗಿದ್ದರು. ಸೆ.15ರಂದು ಸಂಜೆ ತನ್ನ ತಾಯಿಗೆ ದೂರವಾಣಿ ಕರೆ ಮಾಡಿದ ಮುಹಮ್ಮದ್ ಸಮೀರ್ ತಾನು ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದು, ಬಳಿಕ ಸಮೀರ್ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಮಧ್ಯೆ ಸೆ.18ರಂದು ಫಿರ್ದೌಸ್ ತನ್ನ ಮಗುವಿನೊಂದಿಗೆ ತಾಯಿಯ ಮನೆಯಾದ ಕಾಪು ಸಮೀಪದ ಮಜೂರ್‌ಗೆ ಬಂದಿದ್ದ ವಿಷಯ ತಿಳಿದ ಸಮೀರ್‌ನ ಮನೆಮಂದಿ ಅಲ್ಲಿಗೆ ತೆರಳಿ ಆಕೆಯಲ್ಲಿ ಸಮೀರ್‌ನ ಬಗ್ಗೆ ವಿಚಾರಿಸಿದಾಗ ಆತ ಬೇರೆ ಹುಡುಗಿಯ ಸಂಪರ್ಕದಲ್ಲಿದ್ದು, ತನ್ನನ್ನು ಮತ್ತು ಮಗುವನ್ನು ಕಾಪುವಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಳು. ಆ ಬಳಿಕ ಸಮೀರ್‌ನ ತಂದೆ ಅಹ್ಮದ್ ಸಾಹೇಬ್ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.

ಅಲ್ಲದೆ ಮನೆಮಂದಿ ಸಮೀರ್‌ಗಾಗಿ ಬೆಂಗಳೂರಿಗೆ ತೆರಳಿ ಹುಡುಕಾಟ ಆರಂಭಿಸಿದ್ದರು. ಹಾಗೇ ತಮಿಳ್ನಾಡಿನ ದೇವತಾನಪಟ್ಟಿ ಎಂಬಲ್ಲಿ ಮೃತದೇಹವೊಂದು ಪತ್ತೆಯಾಗಿದೆ ಎಂಬ ಮಾಹಿತಿಯ ಮೇರೆಗೆ ಅಲ್ಲಿಗೆ ರವಿವಾರ ತೆರಳಿದ್ದರು. ಸಮೀರ್ ಬಳಸಿದ್ದ ವಾಚ್, ಬೆಲ್ಟ್, ಬಟ್ಟೆಬರೆ ಮತ್ತು ಶೂವನ್ನು ಆಧರಿಸಿ ಸಹೋದರ ಮುಹಮ್ಮದ್ ಝಹೀರ್ ಮೃತದೇಹದ ಗುರುತು ಪತ್ತೆ ಹಚ್ಚಿದ್ದರು. ಅಲ್ಲದೆ ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಸಮೀರ್‌ನ ಆಧಾರ್ ಸಹಿತ ಮತ್ತಿತರ ಪೂರಕ ದಾಖಲೆಪತ್ರಗಳನ್ನು ಸಲ್ಲಿಸಿದರು. ಆ ಬಳಿಕ ದಫನ ಮಾಡಲಾಗಿದ್ದ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಅಲ್ಲದೆ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಸೋಮವಾರ ಅಪರಾಹ್ನ ಗಂಜಿಮಠಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ.

ಈ ಮಧ್ಯೆ ಫಿರ್ದೌಸ್ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಸಜ್ಜಾದ್ ಹುಸೈನ್ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದಂಪತಿಯ ಮೂರು ತಿಂಗಳ ಮಗು ಸಿಮ್ರಾ ಫಾತಿಮಾ ಇದೀಗ ಗಂಜಿಮಠದ ಅಜ್ಜಿಯ ಮನೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News