ಸಂಘಟನೆಯ ಬಗ್ಗೆ ಅವಹೇಳನ ಮಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ; ಎಚ್ಚರಿಕೆ

Update: 2018-09-24 13:34 GMT

ಪುತ್ತೂರು,ಸೆ.24 : ದಲಿತ್ ಸೇವಾ ಸಮಿತಿಯಿಂದ ಅಂಬೇಡ್ಕರ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದ್ದು, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದ್ದು, ಸಂಘಟನೆಯನ್ನು ಒಡೆಯುವ ಷಡ್ಯಂತರ ನಡೆಸಲಾಗುತ್ತಿದೆ ಸಮಾಜದಲ್ಲಿ ಶೋಷಿತರು ಮತ್ತು ನಿರ್ಗತಿಕರ ಪರವಾಗಿ ಕೆಲಸ ಮಾಡುತ್ತಿರುವ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಪದಾಧಿಕಾರಿಗಳಿಗೆ ಅವಹೇಳನ ಮಾಡುವ ಪ್ರತಿಭಟನೆಯನ್ನು ದಲಿತ್ ಸೇವಾ ಸಮಿತಿ ನಡೆಸಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಎಚ್ಚರಿಸಿದರು. 

ಅವರು ಪುತ್ತೂರು ಮಿನಿವಿಧಾನಸೌಧದ ಮುಂಭಾಗದಲ್ಲಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಆಶ್ರಯದಲ್ಲಿ ದಲಿತ್ ಸೇವಾ ಸಮಿತಿ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಪುತ್ತೂರು ತಾಲೂಕು ಅಧ್ಯಕ್ಷ ರಾಜು ಹೊಸ್ಮಠ, ಕಡಬ ಸಂಘಟನಾ ಕಾರ್ಯದರ್ಶಿ ಅಣ್ಣಿ ಯಳ್ತಿಮಾರ್, ಮರಾಠಿ ಸಂಘದ ಅಧ್ಯಕ್ಷ ಸುಂದರ ನಾಯ್ಕ್, ಮಹಿಳಾ ವಿಭಾಗದ ಅಧ್ಯಕ್ಷೆ ಮೋಹಿನಿ ನಾಯ್ಕ್, ಕೃಷ್ಣಪ್ಪ ನಾಯ್ಕ್  ಮೊದಲಾದವರು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇವರು ಇನ್ನು ಮುಂದೆ ಹೀಗೆ ಮಾತನಾಡಿದರೆ ಅವರಿಗೆ ಪಾಠ ಕಲಿಸುವ ಜೊತೆಗೆ ಅವರ ನಾಟಕದ ಕಂಪೆನಿಯನ್ನು ಒಡೆದುಹಾಕುತ್ತೇವೆ ಎಂದು ಹೇಳಿದರು.

ಸುಳ್ಯ ತಾಲೂಕಿನ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ನಾಯ್ಕ್ ಮಾತನಾಡಿ ಬಡ ಜನತೆ ಬಗ್ಗೆ ಹೋರಾಟ ಮಾಡಬೇಕಿದ್ದ ದಲಿತ್ ಸೇವಾ ಸಮಿತಿ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಉಳ್ಳವರಿಂದ 'ದುಡ್ಡು' ಪಡೆದುಕೊಂಡು ಸೇಸಪ್ಪ ಬೆದ್ರಕಾಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ಮಾತನಾಡಿ, ದಲಿತ ಹಾಗೂ ಹಿಂದುಳಿದ ವರ್ಗಗಳ ಜನತೆ ಸರಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳಿಂದ ಇನ್ನೂ ವಂಚಿತರಾಗಿಯೇ ಬದುಕುತ್ತಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಅಶಕ್ತರ ನೋವಿಗೆ ಸ್ಪಂಧಿಸುವ ಕೆಲಸವನ್ನು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಮಾಡುತ್ತಿರುವುದು ಅಭಿಮಾನದ ವಿಚಾರವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸುಳ್ಯ ತಾಲೂಕು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಅಧ್ಯಕ್ಷ ಸುಂದರ ಪಾಟಾಜೆ, ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ತ್ಯಾಗರಾಜನಗರ, ಆಲಂಕಾರು ಗ್ರಾಮಸಮಿತಿ ಅಧ್ಯಕ್ಷ ದಿನೇಶ್ ಆಲಂಕಾರು, ಪುತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೊರಕೆ, ಸುಳ್ಯ ತಾಲೂಕು ಮುಗೇರ ಸಂಘದ ಅಧ್ಯಕ್ಷ ವಿಜಯ ಪಾಟಾಜೆ ಮೊದಲಾದವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಮಲ ರಾಮಚಂದ್ರ ಮತ್ತುಕೃಷ್ಣಪ್ರಸಾದ್ ಆಳ್ವ, ಕಾಂಗ್ರೇಸ್ ಮುಖಂಡ ಎಂ.ಬಿ.ವಿಶ್ವನಾಥ ರೈ,ಪರಮೇಶ್ವರ ಕೆಮ್ಮಿಂಜೆ, ಕೂಸಪ್ಪ ಬೆಳ್ಳಾರೆ, ಕೊಡಗು ನಿರಾಶ್ರಿತರಾದ ಕೆ.ಸೇಸಪ್ಪ ನಾಯ್ಕ್, ಪ್ರಮೋದ್ ತಿಂಗಳಾಡಿ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News