ಕುದ್ರೋಳಿ: ಸುವರ್ಣಶ್ರೀ ಪ್ರಶಸ್ತಿ ಪ್ರದಾನ

Update: 2018-09-24 13:46 GMT

ಮಂಗಳೂರು, ಸೆ.24: ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಸ್ಥಾಪಕ ದಿ.ದಾಮೋದರ ಆರ್. ಸುವರ್ಣ ಅವರ 94ನೆ ಜನ್ಮದಿನಾಚರಣೆ ಪ್ರಯುಕ್ತ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ‘ಸುವರ್ಣ ಶ್ರೀ’ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವು ಕುದ್ರೋಳಿ ನಾರಾಯಣಗುರು ಕಾಲೇಜಿನಲ್ಲಿ ಸೋಮವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತುಳು ಭಾಷೆ, ಸಂಸ್ಕೃತಿ, ಆಚಾರ-ವಿಚಾರದಲ್ಲಿ ಅಪಾರ ಪ್ರೀತಿ ಹೊಂದಿದ್ದ ದಿ. ದಾಮೋದರ ಸುವರ್ಣರು ಸಮುದಾಯ ಸಂಘಟನೆಯೊಂದಿಗೆ ತುಳುಭಾಷಾ ಪರಂಪರೆಗೂ ಅಪಾರ ಕೊಡುಗೆ ನೀಡಿದ್ದಾರೆ. ಬಿಸು ಪರ್ಬ ಆಚರಿಸುವ ಮೂಲಕ ಮೊದಲ ಬಾರಿಗೆ ತುಳುನಾಡಿನ ಆಚರಣೆಯನ್ನು ಕಾರ್ಯರೂಪಕ್ಕೆ ತಂದ ಮೇರು ವ್ಯಕ್ತಿತ್ವ ಅವರದು ಎಂದು ಬಣ್ಣಿಸಿದರು.

ಈ ಸಂದರ್ಭ 306 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹಿರಿಯ ಸಾಮಾಜಿಕ ನೇತಾರೆ ಕೆ.ಎ. ರೋಹಿಣಿ ದಂಪತಿಗೆ ‘ಸುವರ್ಣಶ್ರೀ’ ಪ್ರಶಸ್ತಿ ಪ್ರದಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಎ. ರೋಹಿಣಿ, ಆತ್ಮಸ್ಥೈರ್ಯವೊಂದಿದ್ದರೆ ಕಾರ್ಯಸಾಧ್ಯ ಎಂಬುದಕ್ಕೆ ದಿ. ದಾಮೋದರ ಸುವರ್ಣರು ನಿದರ್ಶನ. ಅವರ ದೂರಾಲೋಚನೆ ಮತ್ತು ಸ್ಪಷ್ಟ ಗುರಿಯಿಂದಾಗಿ ನಾರಾಯಣಗುರು ವಿದ್ಯಾಸಂಸ್ಥೆಗಳು ಹಲವಾರು ವಿದ್ಯಾರ್ಥಿಗಳಿಗೆ ಬದುಕು ಕಲ್ಪಿಸಿಕೊಡುತ್ತಿವೆ ಎಂದರು.

ದಿ. ದಾಮೋದರ ಆರ್. ಸುವರ್ಣ ಅವರ ಪತ್ನಿ ವಾರಿಜಾ ಡಿ. ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ಅತಿಥಿಯಾಗಿದ್ದರು. ಯೂನಿಯನ್ ಮಹಿಳಾ ಘಟಕದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ದಿ. ದಾಮೋದರ ಆರ್. ಸುವರ್ಣರ ಪುತ್ರ ಉದಯಚಂದ್ರ ಡಿ. ಸುವರ್ಣ ಉಪಸ್ಥಿತರಿದ್ದರು.

ಯೂನಿಯನ್ ಗೌರವ ಕಾರ್ಯದರ್ಶಿ ಕಾಶಿನಾಥ್ ಸ್ವಾಗತಿಸಿದರು. ನಾರಾಯಣಗುರು ಕಾಲೇಜು ಪ್ರಾಂಶುಪಾಲ ಡಾ. ವಸಂತಕುಮಾರ್ ವಂದಿಸಿದರು. ಉಪನ್ಯಾಸಕಿ ಶಕೀಲಾರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News