ಚೀನಾ ವಂಚನೆಗೆ ಸಂಬಂಧಿಸಿದಂತೆ 2.7 ಬಿ.ಯುರೋ ಪಾವತಿಸಲು ಬ್ರಿಟನ್‌ಗೆ ಎರಡು ತಿಂಗಳ ಕಾಲಾವಕಾಶ

Update: 2018-09-24 13:54 GMT

ಬ್ರಸೆಲ್ಸ್, ಸೆ.24: ಬ್ರಿಟನ್ ಚೀನಿ ಆಮದುದಾರರ ವಂಚನೆಯನ್ನು ಕಡೆಗಣಿಸಿದ್ದ ಹಿನ್ನಲೆಯಲ್ಲಿ 2.7 ಬಿ.ಯುರೋಗಳ ಸೀಮಾಸುಂಕ ನಷ್ಟವನ್ನು ತುಂಬಿಕೊಡಲು ಆ ರಾಷ್ಟ್ರಕ್ಕೆ ಎರಡು ತಿಂಗಳುಗಳ ಕಾಲಾವಕಾಶವನ್ನು ನೀಡಿರುವ ಐರೋಪ್ಯ ಒಕ್ಕೂಟ(ಇಯು)ವು, ಇಲ್ಲದಿದ್ದರೆ ಇಯು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

ಜವಳಿ ಮತ್ತು ಪಾದರಕ್ಷೆಗಳಿಗಾಗಿ ಚೀನಿ ಆಮದುದಾರರು ರಾಜಾರೋಷವಾಗಿ ನಕಲಿ ಇನ್‌ವೈಸ್‌ಗಳನ್ನು ಬಳಸಿಕೊಂಡು ಸೀಮಾಸುಂಕವನ್ನು ವಂಚಿಸುತ್ತಿದ್ದರೂ ಬ್ರಿಟನ್ ಅದನ್ನು ಕಡೆಗಣಿಸಿತ್ತು ಎನ್ನುವುದು ಐರೋಪ್ಯ ಒಕ್ಕೂಟವು ಕಳೆದ ವರ್ಷ ಕೈಗೊಂಡಿದ್ದ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ವಂಚನೆಯ ಅಪಾಯದ ಬಗ್ಗೆ ಬ್ರಿಟನ್‌ಗೆ ಮಾಹಿತಿ ನೀಡಲಾಗಿತ್ತಾದರೂ ವಂಚನೆಯನ್ನು ತಡೆಯಲು ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳಲು ಅದು ವಿಫಲಗೊಂಡಿತ್ತು ಮತ್ತು ಇದು ಐರೋಪ್ಯ ಒಕ್ಕೂಟದ ಮುಂಗಡಪತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿತ್ತು ಎನ್ನುವುದು ಐರೋಪ್ಯ ಒಕ್ಕೂಟದ ವಾದವಾಗಿದೆ.

ವಿಭಜನೆಯ ನಂತರ ಐರೋಪ್ಯ ಒಕ್ಕೂಟದ ಪರವಾಗಿ ಸೀಮಾಸುಂಕ ತಪಾಸಣೆಯನ್ನು ತಾನು ನಿರ್ವಹಿಸುವ ಕೊಡುಗೆಯನ್ನು ಬ್ರೆಕ್ಸಿಟ್ ನಂತರ ಯುರೋಪ್‌ನೊಂದಿಗೆ ಭವಿಷ್ಯದ ವ್ಯಾಪಾರಕ್ಕಾಗಿ ಬ್ರಿಟನ್‌ನ ಪ್ರಸ್ತಾವನೆಯು ಕೇಂದ್ರಬಿಂದುವನ್ನಾಗಿ ಹೊಂದಿರುವುದರಿಂದ ಇಯು ಕ್ರಮವು ಈಗ ಆ ರಾಷ್ಟ್ರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News