ಗೋರಕ್ಷಕರ ಕುರಿತ ಆದೇಶವನ್ನು ಪಾಲಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Update: 2018-09-24 14:08 GMT

ಹೊಸದಿಲ್ಲಿ, ಸೆ.24: ಗೋರಕ್ಷಕರ ಹಾವಳಿ ಮತ್ತು ಗುಂಪುಹತ್ಯೆಯನ್ನು ತಡೆಯುವ ಸಲುವಾಗಿ ತಾನು ನೀಡಿರುವ ನಿರ್ದೇಶನಗಳನ್ನು ಪಾಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ಸೂಚಿಸಿದೆ.

ಇಂಥ ಘಟನೆಗಳು ಕಾನೂನಿನ ಆಕ್ರೋಶಕ್ಕೆ ಗುರಿಯಾಗುತ್ತವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಶ್ರೇಷ್ಠ ನ್ಯಾಯಾಲಯ ತಿಳಿಸಿದೆ. ಗೋರಕ್ಷಕರ ಮತ್ತು ಗುಂಪುಹತ್ಯೆಯ ತಡೆಗೆ ಜುಲೈ 17ರಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಮಿರೆರಾಂ, ತೆಲಂಗಾಣ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ದಿಲ್ಲಿ ಇನ್ನೂ ವರದಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ಸೂಚನೆಯನ್ನು ನೀಡಿದೆ.

ಗುಂಪು ಹಿಂಸಾಚಾರ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವುದು ಕಾನೂನಿನ ಆಕ್ರೋಶಕ್ಕೆ ಆಹ್ವಾನ ನೀಡುತ್ತದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದು ನ್ಯಾಯಾಧೀಶ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರೂ ಇದ್ದ ನ್ಯಾಯಪೀಠ ತಿಳಿಸಿದೆ. ಮೂರು ದಿನಗಳೊಳಗೆ ತನ್ನ ನಿರ್ದೇಶನವನ್ನು ಪಾಲಿಸಿದ ಕುರಿತು ಅಫಿದಾವಿತ್ ಸಲ್ಲಿಸಲು ಎಲ್ಲ ಎಂಟು ರಾಜ್ಯಗಳಿಗೆ ಅಂತಿಮ ಅವಕಾಶ ನೀಡುವುದಾಗಿ ತಿಳಿಸಿದ ನ್ಯಾಯಾಲಯ ಈ ಬಗ್ಗೆ ಕಾಂಗ್ರೆಸ್ ನಾಯಕ ತೆಹ್ಸೀನ್ ಪೂನಾವಾಲಾ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಗೋರಕ್ಷಕರು ಮತ್ತು ಗುಂಪುಹತ್ಯೆಯ ವಿರುದ್ಧ ದೂರದರ್ಶನ, ರೇಡಿಯೊ ಮತ್ತು ಇತರ ವಿದ್ಯುತ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸಬೇಕು ಎಂದು ಕೇಂದ್ರ ಮತ್ತು ಎಲ್ಲ ರಾಜ್ಯಗಳಿಗೆ ತಾನು ನೀಡಿರುವ ಸೂಚನೆಯನ್ನು ಪಾಲಿಸಲಾಗಿದೆಯೇ ಎಂಬ ಕುರಿತು ನ್ಯಾಯಾಲಯ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News