ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಮಹಿಳಾ ರೋಗಿಗಳಿಂದ ಧರಣಿ

Update: 2018-09-24 14:22 GMT

ಉಡುಪಿ, ಸೆ.24: ಉಡುಪಿ ಕೆ.ಎಂ.ಮಾರ್ಗದಲ್ಲಿರುವ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ರೋಗಿಗಳನ್ನು ಸಮೀಪದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾಯಿಸುವಂತೆ ಸರಕಾರ ನೀಡಿರುವ ಆದೇಶವನ್ನು ವಿರೋಧಿಸಿ ಮಹಿಳಾ ರೋಗಿಗಳು ಇಂದು ಆಸ್ಪತ್ರೆಯ ಎದುರು ಧರಣಿ ನಡೆಸಿದರು.

ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಗೆ ವರ್ಗಾಯಿಸಿರುವ ಮಾಹಿತಿ ತಿಳಿದ ಸುಮಾರು 20ಕ್ಕೂ ಅಧಿಕ ಒಳರೋಗಿ ಮಹಿಳೆಯರು ಆಸ್ಪತ್ರೆಯಿಂದ ಹೊರಗಡೆ ಬಂದು ಧರಣಿ ಕೂತರು. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಯಾವುದೇ ಕಾರಣಕ್ಕೂ ಈ ಆಸ್ಪತ್ರೆ ಬಿಟ್ಟು ಬೇರೆ ಆಸ್ಪತ್ರೆಗೆ ಹೋಗಲ್ಲ ಎಂದು ಪಟ್ಟು ಹಿಡಿದರು.

‘20ವರ್ಷಗಳಿಂದ ನಾವು ಇದೇ ಆಸ್ಪತ್ರೆಗೆ ಬರುತ್ತಿದ್ದೇವೆ. ನಾವು ಬಡವರು ನಮ್ಮಲ್ಲಿ ಹಣ ಇದ್ದರೆ ನಾವು ಇಲ್ಲಿಗೆ ಬರುತ್ತಿದ್ದೇವೆಯೇ. ನಾಳೆ ಆಪರೇಷನ್ ಮಾಡುವುದಾಗಿ ದಾಖಲಿಸಿಕೊಂಡಿರುವ ಇವರು ಈಗ ಬೇರೆ ಕಡೆಗೆ ಹೋಗಿ ಅಂತ ಹೇಳುತ್ತಿದ್ದಾರೆ. ನಾವು ಎಲ್ಲಿಗೆ ಹೋಗುವುದು. ನನಗೆ ಇದೇ ಆಸ್ಪತ್ರೆ ಬೇಕು. ಈ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಈ ಆಸ್ಪತ್ರೆಯನ್ನು ಸರಕಾರ ಉಳಿಸಿಕೊಳ್ಳಬೇಕು’ ಎಂದು ಸುಗಂಧಿ ಆರೂರು ಒತ್ತಾಯಿಸಿದರು.

ಕುಂದಾಪುರ ಮಂಜುಳಾ ಮಾತನಾಡಿ, ತಾಯಿಯನ್ನು ಗರ್ಭಕೋಶ ಶಸ್ತ್ರ ಚಿಕಿತ್ಸೆಗಾಗಿ ಇಲ್ಲಿ ದಾಖಲಿಸಲಾಗಿದೆ. ಇಂತಹ ಸ್ಥಿತಿಯಲ್ಲಿ ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗುವುದು ಎಂಬುದು ಗೊತ್ತಾಗುತ್ತಿಲ್ಲ. ಬಡವರಾದ ನಮಗೆ ದಿಕ್ಕು ಕಾಣದಾಗಿದೆ ಎಂದು ಅಳಲು ತೋಡಿಕೊಂಡರು.

ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿದ ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿ, ಮಹಿಳೆಯರ ಈ ಹೋರಾಟದಲ್ಲಿ ಅರ್ಥ ಇದೆ. ಅದನ್ನು ವ್ಯವಸ್ಥೆ ತಿಳಿದುಕೊಳ್ಳಬೇಕು. ಈ ಸರಕಾರಿ ಆಸ್ಪತ್ರೆ ಕುರಿತು ಈ ಹಿಂದೆ ಹೇಳುತ್ತಿದ್ದ ಭವಿಷ್ಯ ಇಂದು ನಿಜವಾಗುತ್ತಿದೆ. ಆಸ್ಪತ್ರೆಯ ರೋಗಿಗಳು ಅತಂತ್ರರಾಗಿ ಬೀದಿಗೆ ಬೀಳುವಂತಾಗಿದೆ. ಸರಕಾರ ಸವಲತ್ತು ಎಂಬುದು ಪ್ರಜೆಗಳ ಹಕ್ಕು. ಆದರೆ ಖಾಸಗಿಯವರು ನೀಡುವುದು ದಾನ. ಆದರೆ ಅದನ್ನು ಅಮಾನವೀಯ ಸಮಾಜ ಮರೆಯುತ್ತಿದೆ. ಸರಕಾರ ಕೂಡಲೇ ಈ ಆಸ್ಪತ್ರೆಯ ವ್ಯವಹಾರವನ್ನು ಸರಿ ದಾರಿಗೆ ತರಬೇಕು ಮತ್ತು ಆಸ್ಪತ್ರೆಯ ಕುರಿತು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಸಾಕಷ್ಟು ಮುಂಚಿತವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಮಾತನಾಡಿ, ಈ ಆಸ್ಪತ್ರೆಯಲ್ಲಿರುವ ಆಪರೇಷನ್ ಥಿಯೇಟರ್‌ನ ಉಪಕರಣಗಳನ್ನು ಬಿಜಾಪುರ ಜಿಲ್ಲೆಗೆ ವರ್ಗಾಯಿಸಲಾಗುತ್ತಿದೆ. ಏಕಾಏಕಿ ರೋಗಿಗಳನ್ನು ಬೇರೆ ಕಡೆ ಕಳುಹಿಸಲಾಗುತ್ತಿದೆ. ಸರಕಾರದ ಸವಲತ್ತು ಬಡವರಿಗೆ ಸಿಗಬೇಕು. ಆದರೆ ಇಲ್ಲಿ ಬಡವರು ಸರಕಾರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಬಲವಂತದ ವರ್ಗಾವಣೆ ಇಲ್ಲ: ಡಾ.ಕಿಶೋರಿ
ಮೇಲಾಧಿಕಾರಿಗಳ ಆದೇಶದಿಂದ ಇಲ್ಲಿರುವ 20 ತಾಯಂದಿರು ಹಾಗೂ 13 ಮಕ್ಕಳನ್ನು ಸಮೀಪದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿದೆ. ಕೆಲವರಿಗೆ ಹೊಸ ಆಸ್ಪತ್ರೆಯಲ್ಲಿರುವ ಹವಾನಿಯಂತ್ರಣ ಆಗುವುದಿಲ್ಲ ಎಂದು ಹೇಳಿದ್ದಾರೆ. ಅದರಿಂದ ನಾವು ಯಾರನ್ನು ಕೂಡ ಬಲತ್ಕಾರವಾಗಿ ಕಳುಹಿಸುವುದಿಲ್ಲ. ಇಲ್ಲಿನ ಆಪರೇಷನ್ ಥಿಯೇಟರ್‌ನಲ್ಲಿರುವ ಉಪಕರಣಗಳನ್ನು ಬೇರೆ ಕಡೆ ವರ್ಗಾಯಿಸಲಾಗುತ್ತಿದೆ. ನಾಳೆಯಿಂದ ಇಲ್ಲಿ ಯಾವುದೇ ರೋಗಿಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಇಲ್ಲಿಗೆ ಬಂದವರನ್ನು ಹೊಸ ಆಸ್ಪತ್ರೆಗೆ ಕಳುಹಿಸಲಾಗುವುದು.

-ಡಾ.ಕಿಶೋರಿ, ವೈದ್ಯಾಧಿಕಾರಿಗಳು, ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಉಡುಪಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News