ಭಾರತದಲ್ಲಿ ಪ್ರತಿ 10 ಲಕ್ಷ ಜನರಿಗೆ ಕೇವಲ 19 ನ್ಯಾಯಾಧೀಶರು!

Update: 2018-09-24 14:20 GMT

ಹೊಸದಿಲ್ಲಿ,ಸೆ.24: ಕಾನೂನು ಸಚಿವಾಲಯದ ಅಂಕಿಅಂಶಗಳಂತೆ ಭಾರತದಲ್ಲಿ ಸರಾಸರಿ 10 ಲಕ್ಷ ಜನರಿಗೆ ಕೇವಲ 19 ನ್ಯಾಯಾಧೀಶರಿದ್ದಾರೆ ಮತ್ತು ನ್ಯಾಯಾಂಗದಲ್ಲಿ ಒಟ್ಟು 6,000ಕ್ಕೂ ಅಧಿಕ ನ್ಯಾಯಾಧೀಶರ ಕೊರತೆಯಿದೆ,ಈ ಪೈಕಿ ಕೆಳನ್ಯಾಯಾಲಯಗಳಲ್ಲಿಯೇ 5,000ಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ.

ಸಂಸತ್‌ನಲ್ಲಿ ಚರ್ಚೆಗಾಗಿ ಈ ವರ್ಷದ ಮಾರ್ಚ್‌ನಲ್ಲಿ ಸಿದ್ಧಗೊಳಿಸಲಾಗಿರುವ ವರದಿಯಂತೆ ಭಾರತದಲ್ಲಿ ನ್ಯಾಯಾಧೀಶರು -ಜನತೆಯ ಅನುಪಾತ ಪ್ರತಿ 10 ಲಕ್ಷ ಜನಸಂಖ್ಯೆಗೆ 19.49ರಷ್ಟಿದೆ. ಅಧೀನ ನ್ಯಾಯಾಲಯಗಳಲ್ಲಿ 5,748 ಮತ್ತು ಉಚ್ಚ ನ್ಯಾಯಾಲಯಗಳಲ್ಲಿ 406 ನ್ಯಾಯಾಧೀಶರ ಹುದ್ದೆಗಳು ಖಾಲಿಯಿವೆ.

ಅಧೀನ ನ್ಯಾಯಾಲಯಗಳಲ್ಲಿ ಮಂಜೂರಾಗಿರುವ ನ್ಯಾಯಾಧೀಶರ ಸಂಖ್ಯೆ 22,474 ಆಗಿದ್ದರೂ ಕೇವಲ 16,726 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಚ್ಚ ನ್ಯಾಯಾಲಯಗಳಲ್ಲಿ 1079 ನ್ಯಾಯಾಧೀಶರು ಇರಬೇಕಾಗಿದ್ದರೂ,ವಾಸ್ತವದಲ್ಲಿ 673 ನ್ಯಾಯಾಧೀಶರಿದ್ದಾರೆ. 31 ನ್ಯಾಯಾಧೀಶರಿರಬೇಕಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಆರು ಹುದ್ದೆಗಳು ಖಾಲಿಯಿವೆ. ಹೀಗೆ ದೇಶದ ಎಲ್ಲ ನ್ಯಾಯಾಲಯಗಳಲ್ಲಿ ಒಟ್ಟು 6,160 ನ್ಯಾಯಾಧಿಶರ ಹುದ್ದೆಗಳು ಖಾಲಿಯಿವೆ.

2016,ಎಪ್ರಿಲ್‌ನಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿಯೇ ನ್ಯಾಯಾಧೀಶರು-ಜನತೆಯ ಅನುಪಾತದ ಬಗ್ಗೆ ಚರ್ಚೆಗೆ ಮರುನಾಂದಿ ಹಾಡಿದ್ದರು. ದಾವೆಗಳ ಮಹಾಪೂರವನ್ನು ನಿರ್ವಹಿಸಲು ನ್ಯಾಯಾಧೀಶರ ಸಂಖ್ಯೆಯನ್ನು ಹಾಲಿ 21,000ದಿಂದ 40,000ಕ್ಕೆ ಹೆಚ್ಚಿಸುವಲ್ಲಿ ಸರಕಾರಗಳ ನಿಷ್ಕ್ರಿಯೆಯ ಬಗೆ ವಿಷಾದಿಸಿದ್ದ ಅವರು, ನೀವು ಎಲ್ಲ ಹೊರೆಯನ್ನೂ ನ್ಯಾಯಾಂಗದ ಮೇಲೆಯೇ ಹೊರಿಸುವಂತಿಲ್ಲ ಎಂದು ಹೇಳಿದ್ದರು.

ಮೊಕದ್ದಮೆಗಳು ಭಾರೀ ಪ್ರಮಾಣದಲ್ಲಿ ಬಾಕಿಯಿರುವುದಕ್ಕೆ ಕೆಳನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯು ಪ್ರಮುಖ ಕಾರಣಗಳಲ್ಲೊಂದಾಗಿರುವುದರಿಂದ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಇತ್ತೀಚಿಗೆ ದೇಶದ 24 ಉಚ್ಚ ನ್ಯಾಯಾಲಯಗಳನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News