ಎಸ್‌ಸಿಡಿಸಿಸಿ ಬ್ಯಾಂಕ್ ಸ್ಥಳಾಂತರಿತ ಕುಂದಾಪುರ ಶಾಖೆ ಉದ್ಘಾಟನೆ

Update: 2018-09-24 14:30 GMT

ಕುಂದಾಪುರ, ಸೆ.24: ಸಹಕಾರಿ ಸಂಘಗಳಿಗೆ ಸಾಮಾನ್ಯ ಜನರ ಕಷ್ಟ, ನೋವುಗಳು ಅರ್ಥವಾಗುತ್ತವೆ. ಸಹಕಾರಿ ಸಂಸ್ಥೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ನಿಯಮಾವಳಿಯ ಗೊಂದಲ ಇಲ್ಲದೆ ಜನಸಾಮಾನ್ಯರಿಗೆ ಅತಿ ಸರಳವಾಗಿ ಸಾಲ ಸಿಗುತ್ತದೆ. ಇದರಿಂದಲೇ ಸಹಕಾರಿ ಸಂಸ್ಥೆಗಳು ಇಂದು ಅಗಾಧ ಶಕ್ತಿಯಾಗಿ ಬೆಳೆದಿದೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಂದಾಪುರ ಪಾರಿಜಾತ ಹೊಟೇಲ್ ಎದುರುಗಡೆಯ ಅಥರ್ವ ಕಾಂಪ್ಲೆಕ್ಸ್‌ನ ಮೊದಲ ಮಹಡಿಗೆ ಸ್ಥಳಾಂತರಗೊಂಡ ಸಂಪೂರ್ಣ ಹವಾನಿಯಂತ್ರಿತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕುಂದಾಪುರ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರೈತರ ಸಾಲಮನ್ನಾಕ್ಕೆ ಸಂಬಂಧಿಸಿ ಸರಕಾರ ಸಹಕಾರಿ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದೆ ಇರುವುದರಿಂದ ಸಮಸ್ಯೆಗಳ ಸೃಷ್ಠಿಯಾಗಿದ್ದು, ಇದರ ಮಧ್ಯೆಯೇ ಸಹಕಾರಿ ಸಂಸ್ಥೆಗಳು ಕೆಲಸ ನಿರ್ವಹಿಸುವಂತಾಗಿದೆ. ಆದುದರಿಂದ ಸರಕಾರ ಸಹಕಾರಿ ಸಂಸ್ಥೆಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಅಲ್ಲದೆ ಸಾಲ ಮನ್ನಾ ಬಾಕಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎಸ್.ರಾಜೇಂದ್ರ ಕುಮಾರ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಹೊಸ ತಂತ್ರಜ್ಞಾನದೊಂದಿಗೆ ಶಾಖೆಯನ್ನು ಸ್ಥಳಾಂತರಿಸಲಾಗಿದೆ. ಕಳೆದ ವರ್ಷ 84ಕೋಟಿ ಇದ್ದ ಬ್ಯಾಂಕಿನ ಠೇವಣಿ ಈಗ 100 ಕೋಟಿ ರೂ.ಗೆ ಏರಿಕೆಯಾಗಿದೆ. ಸೇವೆಯಲ್ಲಿ ಸಹಕಾರಿ ಸಂಸ್ಥೆಗಳು ವಾಣಿಜ್ಯ ಬ್ಯಾಂಕ್‌ಗಳಿಗಿಂತ ಮುಂದೆ ಇವೆ ಎಂದರು.

ಕುಂದಾಪುರ ಪ್ರಾಥಮಿಕ ಕೃಷಿ ಅಬಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ, ಸಹಕಾರಿ ಸಂಘಗಳ ಉಪನಿಬಂಧಕಿ ಚಂದ್ರಪ್ರತಿಮಾ ಎಂ.ಜಿ, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಕೃಷ್ಣಮೂರ್ತಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಐಕಳ ದೇವಿಪ್ರಸಾದ ಶೆಟ್ಟಿ, ಬಿ.ರಘು ರಾಮ ಶೆಟ್ಟಿ, ಶಶಿಕುಮಾರ್ ರೈ, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ. ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಟ್ಟಡ ಮಾಲಕ ಗಣೇಶ್ ನಾಯಕ್ ಹಾಗೂ ಶಾಖಾ ವ್ಯವಸ್ಥಾಪಕ ಮೋಹನ್‌ದಾಸ್ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News