ತನ್ನ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಯ ವಿರುದ್ಧವೇ ದೂರು ನೀಡಿದ ಸಿಬಿಐ ನಿರ್ದೇಶಕ

Update: 2018-09-24 14:38 GMT
ರಾಕೇಶ್ ಅಸ್ತಾನ 

ಹೊಸದಿಲ್ಲಿ, ಸೆ.24: ಸಿಬಿಐ ನಿರ್ದೇಶಕ ಅಲೋಕ್ ವರ್ಮ ಹಾಗೂ ಹಿರಿಯ ಅಧಿಕಾರಿ ರಾಕೇಶ್ ಅಸ್ತಾನ ನಡುವಿನ ಮುಸುಕಿನ ಗುದ್ದಾಟಕ್ಕೆ ಇನ್ನೊಂದು ತಿರುವು ದೊರೆತಿದೆ. ಆಸ್ಥಾನ ಅವರು ತಮ್ಮ ಹಿರಿಯಾಧಿಕಾರಿ ಅಲೋಕ್ ವರ್ಮ ಸಹಿತ ತಮ್ಮ ಕಿರಿಯ ಅಧಿಕಾರಿ, ಜಂಟಿ ನಿರ್ದೇಶಕ ಎ.ಕೆ. ಶರ್ಮ ವಿರುದ್ಧ ಕೂಡ ದೂರು ದಾಖಲಿಸಿದ್ದಾರೆ. ಅಸ್ತಾನ ವಿರುದ್ಧ ಸಿಬಿಐ ನಡೆಸುತ್ತಿರುವ ಆಂತರಿಕ ತನಿಖೆಯ ನೇತೃತ್ವವನ್ನು ಶರ್ಮ ವಹಿಸಿದ್ದಾರೆಂಬುದು ಇಲ್ಲಿ ಉಲ್ಲೇಖಾರ್ಹ.

ಅಸ್ತಾನ ವಿರುದ್ಧದ ಆರು ಭ್ರಷ್ಟಾಚಾರ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ. ವರ್ಮ ವಿರುದ್ಧ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ದೂರು ನೀಡುವ ಮೂಲಕ ಅಸ್ತಾನ ಅವರು ಇತರ ಅಧಿಕಾರಿಗಳನ್ನು ಬೆದರಿಸಲು ಯತ್ನಿಸುತ್ತಿದ್ದಾರೆಂಬ ಆರೋಪವೂ ಇದೆ.

ಸಿಬಿಐ ನಿರ್ದೇಶಕ ವರ್ಮ ವಿರುದ್ಧದ ಆರೋಪದ ಹೊರತಾಗಿ ನಿರ್ದೇಶಕ ಶರ್ಮ ವಿರುದ್ಧದ ದೂರಿನಲ್ಲಿ ಅವರು ಶೆಲ್ ಕಂಪೆನಿಗಳನ್ನು ನಡೆಸುತ್ತಿದ್ದಾರೆಂದು ಅಸ್ತಾನ ಆರೋಪಿಸಿದ್ದಾರೆ.

ಅಸ್ತಾನ ವಿರುದ್ಧ ಆರು ಪ್ರಕರಣಗಳ ತನಿಖೆ ಮುಂದುವರಿದಂತೆಯೇ ಅವರು  ಸರಕಾರಕ್ಕೆ ಪತ್ರ ಬರೆದು ಸಿಬಿಐ ನಿರ್ದೇಶಕ ತನ್ನ ಕಾರ್ಯನಿರ್ವಹಣೆಗೆ  ಅಡ್ಡಿ ಉಂಟು ಮಾಡುತ್ತಿದ್ದಾರೆಂದು ಹಾಗೂ ತನಿಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆಂದು ಆರೋಪಿಸಿದ್ದರು.

ಸ್ಟರ್ಲಿಂಗ್ ಬಯೋಟಕ್ ಗೆ ಸಂಬಂಧಿಸಿದ ರೂ 5,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣವನ್ನೂ ಗುಜರಾತ್ ಮೂಲದ ಅಧಿಕಾರಿ ಶರ್ಮ ನಡೆಸುತ್ತಿದು, ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ಅಸ್ತಾನ ಅವರು  ಸ್ಟರ್ಲಿಂಗ್ ಬಯೋಟೆಕ್ ನಿರ್ದೇಶಕರ ವಿರುದ್ಧ  ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳದಂತೆ ಪ್ರಯತ್ನಿಸಿದ್ದರೆಂಬ ಆರೋಪವನ್ನೂ ಪರಿಶೀಲಿಸಲಾಗುತ್ತಿದೆ. ಸ್ಟರ್ಲಿಂಗ್ ಬಯೋಟೆಕ್ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟ ಉದ್ಯಮಿಗಳ ಖಾಸಗಿ ವಿಮಾನಗಳನ್ನು ಅಸ್ತಾನ ಕುಟುಂಬ ಸದಸ್ಯರು ಉಪಯೋಗಿಸಿದ್ದರೆಂಬ ಆರೋಪವೂ ಇದೆ.

ತನಗೆ ತನಿಖೆಗೆ ಸಂಬಂಧಿಸಿದಂತೆ ಯಾವುದೇ ನೋಟಿಸ್ ಅಥವಾ ಸಮನ್ಸ್ ಬಂದಿಲ್ಲ, ತನಿಖೆ ನಡೆಸಬೇಕಾದರೆ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 17ಎ ಅನ್ವಯ ಅನುಮತಿ ಪಡೆಯಬೇಕು ಎಂದು ಅಸ್ತಾನ ಹೇಳುತ್ತಿದ್ದಾರೆ. ಆದರೆ ಸ್ಟರ್ಲಿಂಗ್ ಬಯೋಟೆಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ಸರಕಾರಿ ಅಧಿಕಾರಿಗಳನ್ನೂ  ಆರೋಪಿಗಳೆಂದು ಹೆಸರಿಸಲಾಗಿದೆ. ದೋಷಾರೋಪ ಪಟ್ಟಿ ಸಲ್ಲಿಸುವ ವೇಳೆ  ಆಸ್ಥಾನ ವಿರುದ್ಧ ಕ್ರಮ ಕೈಗೊಳ್ಳಲು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯನ್ವಯ ಸೂಕ್ತ ಅನುಮತಿ ಪಡೆಯಲಾಗುವುದು ಎಂದೂ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News