ಬ್ಯಾಂಕ್‌ಗಳಿಂದ ಸಾಲ ನೀಡಿಕೆಯಲ್ಲಿ ಇಳಿಕೆ : ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ.ಸೆಲ್ವಮಣಿ ಅಸಮಾಧಾನ

Update: 2018-09-24 14:55 GMT

ಮಂಗಳೂರು, ಸೆ. 24: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಂದ ಜೂನ್ 30ಕ್ಕೆ ಕೊನೆಗೊಂಡ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಆದ್ಯತಾ ವಲಯದಡಿ ಕೃಷಿ ಹಾಗೂ ಇತರ ಆದ್ಯತಾ ವಲಯದಡಿ ಸಾಲ ನೀಡಿಕೆಯಲ್ಲಿ ಇಳಿಕೆಯಾಗಿರುವ ಬಗ್ಗೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೂತನ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಮೂರು ದಿನಗಳ ಅವಧಿಯಲ್ಲೇ ಇಂದು ನಡೆದ ಲೀಡ್ ಬ್ಯಾಂಕ್‌ನ ಅಧ್ಯಕ್ಷತೆ ವಹಿಸಿದ್ದ ಡಾ. ಸೆಲ್ವಮಣಿಯವರು ಸಭೆಯಲ್ಲಿ ಆದ್ಯತಾ ವಲಯವಾದ ಕೃಷಿ, ಕೈಗಾರಿಕೆ ಹಾಗೂ ಇತರ ಆದ್ಯತಾ ವಲಯವಾದ ಶಿಕ್ಷಣ, ವಸತಿ ಯೋಜನೆಗಳ ಸಾಲ ಸೌಲಭ್ಯದ ಬಗ್ಗೆ ಒತ್ತು ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆದರೆ, ಸಭೆಯಲ್ಲಿ ಹಲವು ಅಧಿಕಾರಿಗಳ ಗೈರು, ಅಸಮರ್ಪಕ ಮಾಹಿತಿ ಬಗ್ಗೆ ಅವರಿಗೆ ಅಸಮಾಧಾನವನ್ನುಂಟುಮಾಡಿತು.

ಆದ್ಯತೆ ಹಾಗೂ ಇತರ ಆದ್ಯತಾ ವಲಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ಸುಧಾರಣೆ ಮಾಡಬೇಕೆಂದು ಅವರು ಈ ಸಂದರ್ಭ ಬ್ಯಾಂಕ್‌ಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳನ್ನು ಹೊರತುಪಡಿಸಿ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗದಿದ್ದರೂ, ಶಿಕ್ಷಣ ಮತ್ತು ವಸತಿಗೆ ಸಾಲ ಸೌಲಭ್ಯ ಒದಗಿಸುವಂತ ಇತರ ಆದ್ಯತಾ ವಲಯದಡಿ ಪ್ರಥಮ ತ್ರೈಮಾಸಿಕ ಅವಧಿಯಲ್ಲೇ ಹೆಚ್ಚಿನ ಪ್ರಗತಿಯಾಗಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಸಿಇಒ ಡಾ. ಸೆಲ್ವಮಣಿ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಆದ್ಯತಾ ವಲಯ ಮತ್ತು ಆದ್ಯತೇತರ ವಲಯದಡಿ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಶೇ. 28.72ರಷ್ಟು ಸಾಧನೆಯಾಗಿರುವ ಮಾಹಿತಿಯನ್ನು ಲೀಡ್ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕರು ಸಭೆಯಲ್ಲಿ ಮಾಹಿತಿ ನೀಡಿದರು.

ಒಟ್ಟು ಆದ್ಯತಾ ವಲಯದಡಿ ವಾರ್ಷಿಕ ಗುರಿಯ 11921.84 ಕೋಟಿ ರೂ. ಗುರಿಯಡಿ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 1996.41 ಕೋಟಿ ರೂ. ಸಾಲ ವಿತರಿಸಲಾಗಿದೆ. ಆದ್ಯತೇತರ ವಲಯದಡಿ ವಾರ್ಷಿಕ ಗುರಿಯ 4078.16 ಕೋಟಿ ರೂ.ಗಳ ಗುರಿಯಡಿ ಪ್ರಥಮ ಅವಧಿಯಲ್ಲಿ 2598.87 ಕೋಟಿ ರೂ. ಸಾಲ ವಿತರಣೆಯಾಗಿದೆ ಎಂದು ಲೀಡ್ ಬ್ಯಾಂಕ್ ಅಧಿಕಾರಿ ಮಾಹಿತಿ ನೀಡಿದರು.

ಕೃಷಿ ವಲಯದಲ್ಲಿ ವಾರ್ಷಿಕ 4932.82 ಕೋಟಿ ರೂ. ಗುರಿ ನಿಗದಿಯಾಗಿದ್ದು, ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 977.79 ಕೋಟಿ ರೂ. ಸಾಲ ನೀಡುವ ಮೂಲಕ ಶೇ. 19.82ರಷ್ಟು ಸಾಧನೆಯಾಗಿದೆ. ಇತರ ಆದ್ಯತಾ ವಲಯದಡಿ 3766.05 ಕೋಟಿ ರೂ.ಗಳ ವಾರ್ಷಿಕ ಗುರಿಯಡಿ ಈ ಅವಧಿಯಲ್ಲಿ 255.22 ಕೋಟಿ ರೂ.ಗಳ ಸಾಲ ವಿತರಿಸುವ ಮೂಲಕ ಶೇ. 6.78 ಸಾಧನೆಯಾಗಿದೆ.

ಸಾಲ ಮತ್ತು ಠೇವಣಿ ಅನುಪಾತ ಪ್ರಮಾಣ ನಿರ್ವಹಣೆಯಲ್ಲಿ ಕೆಲವು ಬ್ಯಾಂಕ್‌ಗಳು ಹಿನ್ನಡೆಯಲ್ಲಿರುವುದು ಕಂಡುಬಂದಿದ್ದು ಮುಂದಿನ ತ್ರೈಮಾಸಿಕದಲ್ಲಿ ಇದನ್ನು ಆರ್‌ಬಿಐ ಮಾನದಂಡದಂತೆ ಕಾದ್ದುಕೊಳ್ಳುವಲ್ಲಿ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.ಮುಂದಿನ ತ್ರೈಮಾಸಿಕದಲ್ಲಿ ಸಾಲ ಮತ್ತು ಠೇವಣಿ ಅನುಪಾತದಲ್ಲಿ ಕಡಿಮೆ ನಿರ್ವಹಣೆ ಮಾಡಿರುವ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆಯನ್ನು ಪ್ರತ್ಯೇಕವಾಗಿ ಮಾಡಲಾಗವುದು ಎಂದು ಆರ್‌ಬಿಐ ಡಿಡಿಎಂ ಪಟ್ನಾಯಕ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ 647 ಬ್ಯಾಂಕ್ ಶಾಖೆಗಳು ಜೂನ್ ಅಂತ್ಯದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 69049.91 ಕೋಟಿರೂ.ಗಳ ಒಟ್ಟು ವ್ಯವಹಾರವನ್ನು ದಾಖಲಿಸಿವೆ.

ಸಭೆಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಡಿಜಿಎಂ ಶಿವಸ್ವಾಮಿ, ನಬಾರ್ಡ್ ಅಧಿಕಾರಿ ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News