ಅ.2ರಿಂದ ನ.19ರವರೆಗೆ ಕಾಂಗ್ರೆಸ್‌ನಿಂದ ಲೋಕ ಸಂಪರ್ಕ ಅಭಿಯಾನ : ಪಿ.ಸಿ.ವಿಷ್ಣುನಾಥನ್

Update: 2018-09-24 15:25 GMT

ಉಡುಪಿ, ಸೆ.24: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಇದೇ ಅ.2ರಿಂದ ನ.19ರವರೆಗೆ ದೇಶಾದ್ಯಂತ ‘ಲೋಕ ಸಂಪರ್ಕ ಅಭಿಯಾನ’ವನ್ನು ಆಯೋಜಿಸಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಪಿ.ಸಿ. ವಿಷ್ಣುನಾಥನ್ ತಿಳಿಸಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಸೋಮವಾರ ಭೇಟಿ ನೀಡಿ, ಪಕ್ಷದ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

ಪ್ರತಿ ಬೂತ್ ಮಟ್ಟದಲ್ಲಿ ಸಕ್ರಿಯರಾಗಿರುವ 10 ಮಂದಿ ಕಾರ್ಯಕರ್ತರನ್ನು ‘ಸಹಯೋಗಿ’ಗಳಾಗಿ ನೇಮಿಸಿಕೊಂಡು ಪ್ರತಿಯೊಬ್ಬರಿಗೂ ತಲಾ 25 ಮನೆಗಳನ್ನು ಸಂಪರ್ಕಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಅವರು ಪ್ರತಿ ಮನೆಗೆ ಭೇಟಿ ನೀಡಿ ಕೇಂದ್ರ ಸರಕಾರದ ವೈಫಲ್ಯ, ಹಗರಣಗಳು ಹಾಗೂ ರಾಜ್ಯ ಸಮ್ಮಿಶ್ರ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಬೇಕಾಗಿದೆ ಎಂದರು.

ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮೂರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಶಕ್ತಿ ಪ್ರದರ್ಶನ, ಲೋಕ ಸಂಪರ್ಕ ಅಭಿಯಾನ ಹಾಗೂ ಮೊದಲ ಬಾರಿ ಮತ ಹಾಕುವ 18ರಿಂದ 21 ವರ್ಷದೊಳಗಿನ ಹೊಸ ಮತದಾರರನ್ನು ಗುರುತಿಸಿ ಅವರನ್ನು ಸೆಳೆಯುವ ಪ್ರಯತ್ನ ನಡೆಯಲಿದೆ ಎಂದರು.

ಜನರಿಂದ ನಿಧಿ ಸಂಗ್ರಹ: ಕಾಂಗ್ರೆಸ್ ಈ ಬಾರಿ ಜನರಿಂದಲೇ ಹಣ ಸಂಗ್ರಹಿಸಿ ಚುನಾವಣೆಯನ್ನು ಎದುರಿಸಲು ನಿರ್ಧರಿಸಿದೆ. ಬಿಜೆಪಿ ಅಂಬಾನಿ, ಅದಾನಿಯಂಥ ಕಾರ್ಪೋರೇಟ್‌ಗಳಿಂದ ಹಣ ಸಂಗ್ರಹಿಸಿದರೆ, ಕಾಂಗ್ರೆಸ್ ಜನಸಾಮಾನ್ಯರಿಂದ ಹಣ ಸಂಗ್ರಹಿಸಿ ಚುನಾವಣೆ ಎದುರಿಸಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ.

ಹೀಗಾಗಿ ಸಹಯೋಗಿಗಳು 100, 500 ಹಾಗೂ 1000ರೂ. ಕೂಪನ್ ಮೂಲಕ ಹಣ ಸಂಗ್ರಹಿಸಲಿದ್ದು, ಎಲ್ಲರಿಗೂ ರಶೀದಿಯನ್ನು ನೀಡಿಯೇ ಹಣ ಪಡೆಯುತ್ತೇವೆ. ಎಲ್ಲವೂ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ ಎಂದು ವಿಷ್ಣುನಾಥನ್ ತಿಳಿಸಿದರು.

ಹೀಗೆ ಸಾರ್ವಜನಿಕರಿಂದ ಸಂಗ್ರಹಿಸುವ ಹಣದಲ್ಲಿ ಶೇ.50 ಎಐಸಿಸಿಗೆ, ತಲಾ ಶೇ.15ರಷ್ಟು ಜಿಲ್ಲಾ ಹಾಗೂ ರಾಜ್ಯ ಕಾಂಗ್ರೆಸ್‌ಗೆ ಹಾಗೂ ಶೇ.20ರಷ್ಟು ಬ್ಲಾಕ್ ಕಾಂಗ್ರೆಸ್‌ಗೆ ಹಂಚಿಕೆ ಮಾಡಲಾಗುವುದು. ಈ ಮೂಲಕ ಈ ಬಾರಿ ಬ್ಲಾಕ್ ಮಟ್ಟದಲ್ಲಿ ಇದೇ ನಿಧಿಯಿಂದ ಚುನಾವಣೆಯನ್ನು ಎದುರಿಸಲಾಗುವುದು ಎಂದರು.

ಶಕ್ತಿ ಪ್ರದರ್ಶನದಲ್ಲಿ ಈಗಾಗಲೇ ಉಡುಪಿಯಲ್ಲಿ ಕೇಂದ್ರ ಸರಕಾರದ ರಫೇಲ್ ಹಗರಣದ ವಿರುದ್ಧ ನಡೆಸಿದ ಹೋರಾಟ ಹಾಗೂ ಬೆಲೆ ಏರಿಕೆ ವಿರುದ್ಧ ನಡೆದ ಭಾರತ್ ಬಂದ್ ಯಶಸ್ಸಿಯಾಗಿದೆ ಎಂದರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಬ್ಲಾಕ್ ಅಧ್ಯಕ್ಷರು ಕೂಡಲೇ ಬೂತ್ ಮಟ್ಟದಲ್ಲಿ ಸಹಯೋಗಿಗಳನ್ನು ಗುರುತಿಸಿ ಅವರಿಗೆ ಹೊಸ ಹೊಣೆಗಾರಿಕೆಯನ್ನು ವಹಿಸಿಕೊಡಬೇಕಿದೆ. ಹೊಸ ಸದಸ್ಯರ ಸೇರ್ಪಡೆಯೂ ತ್ವರಿತಗತಿಯಲ್ಲಿ ನಡೆಯಬೇಕಿದೆ ಎಂದರು.

ರವಿವಾರ ಬೆಂಗಳೂರಿನಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪಕ್ಷ ಸಂಘಟನೆಗಾಗಿ ಜನರ ನಿರಂತರ ಸಂಪರ್ಕದಲ್ಲಿರುವ ಯುವ ಮುಖಂಡರನ್ನು ನೋಡಿಕೊಂಡು ಬ್ಲಾಕ್ ಕಾಂಗ್ರೆಸ್‌ನ್ನು ಪುನರ್‌ರಚಿಸಲು ಸೂಚನೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಭಂಡಾರಿ, ಪಕ್ಷದ ಮುಖಂಡರಾದ ಜಿ.ಎ.ಬಾವಾ, ಬಿ.ನರಸಿಂಹ ಮೂರ್ತಿ, ಮಮತಾ ಗಟ್ಟಿ, ನವೀನ್ ಡಿಸೋಜ, ಎಂ.ಎಸ್.ಮೊಹಮ್ಮದ್, ಕಳ್ಳಿಗೆ ತಾರಾನಾಥ ಶೆಟ್ಟಿ, ಕೃಷ್ಣರಾಜ ಸರಳಾಯ, ದಿವಾಕರ ಶೆಟ್ಟಿ ಕಾಪು, ಅಶೋಕ ಕೊಡವೂರು, ಮನೋಜ್, ಇಸ್ಮಾಯಿಲ್ ಆತ್ರಾಡಿ, ಯತೀಶ್ ಕರ್ಕೇರ, ಸತೀಶ್ ಅಮೀನ್ ಪಡುಕರೆ, ನಿತ್ಯಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸುಧೀರ್ ಹೆಗ್ಡೆ, ನೀರೆಕೃಷ್ಣ ಶೆಟ್ಟಿ, ಸುಧಾಕರ್ ಕೋಟ್ಯಾನ್, ಎಸ್. ಸಂಜೀವ ಶೆಟ್ಟಿ, ಗೀತಾ ವಾಗ್ಲೆ, ಹರೀಶ್ ಕಿಣಿ, ನವೀನ್‌ಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News