ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ

Update: 2018-09-24 15:32 GMT

ಮಂಗಳೂರು, ಸೆ.24: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿ ಸುಡಿಕಿರಿ ಗುಡ್ಡೆಯ ಕೃಷ್ಣ ಪಿ.ಆರ್. (23)ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಹಾಗೂ ಪೊಕ್ಸೊ ವಿಶೇಷ ನ್ಯಾಯಾಲಯವು ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದೆ.

2015 ಸೆ.8ರಂದು ಆರೋಪಿ ಕೃಷ್ಣ ಪಿ.ಆರ್. ಬಾಲಕಿಯ ಮನೆಗೆ ತೆರಳಿ ಆಕೆ ಒಬ್ಬಳೇ ಇರುವುದನ್ನು ಖಾತರಿ ಪಡಿಸಿ ಮದುವೆಯಾಗುವುದಾಗಿ ಪುಸಲಾಯಿಸಿ ಆಕೆಯ ಜತೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದನು. ಆ ಬಳಿಕ ಆಕೆಯ ಮನೆಗೆ ತೆರಳಿ ಅತ್ಯಾಚಾರ ಎಸಗಿದ್ದನು ಎಂದು ಆರೋಪಿಸಲಾಗಿತ್ತು.

ಬಾಲಕಿ ಗರ್ಭವತಿಯಾಗಿ 4 ತಿಂಗಳಾಗುವ ವೇಳೆ ವಿಷಯ ಹೆತ್ತವರಿಗೆ ಗೊತ್ತಾಗಿತ್ತು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಬಾಲಕಿಯ ಜೀವಕ್ಕೆ ಅಪಾಯವಿರುವುದಾಗಿ ಹೇಳಿದ್ದರಿಂದ ಗರ್ಭಪಾತ ಮಾಡಿಸಲಾಗಿತ್ತು. ಭ್ರೂಣವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಆರೋಪಿ ಕೃಷ್ಣ ಪಿ.ಆರ್. ಭ್ರೂಣದ ಜೈವಿಕ ತಂದೆ ಎಂಬುದಾಗಿ ರುಜುವಾತಾಗಿತ್ತು.

ಸುಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಸತೀಶ್ ಬಿ.ಎಸ್. ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಅಲ್ಲದೆ ಐಪಿಸಿ ಸೆ. 376 (ಅತ್ಯಾಚಾರ) ಮತ್ತು ಪೊಕ್ಸೊ ಕಾಯ್ದೆ ಕಲಂ 6 ರನ್ವಯ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್. ಪಲ್ಲವಿ ಆರೋಪಿ ಕೃಷ್ಣ ಪಿ.ಆರ್. ತಪ್ಪಿತಸ್ಥ ಎಂದು ಘೋಷಿಸಿ ಆತನಿಗೆ ಐಪಿಸಿ ಸೆ. 376 ಅನ್ವಯ 7 ವರ್ಷ ಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ಪೊಕ್ಸೊ ಕಾಯ್ದೆಯ ಕಲಂ 6 ರನ್ವಯ 10 ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದರು. ಎರಡೂ ಶಿಕ್ಷೆಗಳನ್ನು ಏಕ ಕಾಲದಲ್ಲಿ ಅನುಭವಿಸುವಂತೆ ಆದೇಶ ನೀಡಲಾಗಿದೆ. ದಂಡ ತೆರಲು ತಪ್ಪಿದರೆ ಮತ್ತೆ ಹೆಚ್ಚುವರಿಯಾಗಿ 6 ತಿಂಗಳ ಶಿಕ್ಷೆಯನ್ನು ಅನುಭವಿಸ ಬೇಕಾಗಿದೆ.

ಒಟ್ಟು 10,000 ರೂ. ದಂಡ ಮೊತ್ತದಲ್ಲಿ 7,500 ರೂ. ಗಳನ್ನು ಸಂತ್ರಸ್ತ ಬಾಲಕಿಗೆ ಪಾವತಿಸಬೇಕು. ಅಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಪರಿಹಾರವನ್ನು ಪಡೆಯಲು ಬಾಲಕಿಗೆ ಅವಕಾಶವಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 17 ಸಾಕ್ಷಿಗಳನ್ನು ವಿಚಾರಣೆಗೆ ಒಳ ಪಡಿಸಲಾಗಿತ್ತು. ಡಿಎನ್‌ಎ ಪರೀಕ್ಷೆಯ ವರದಿ ಮತ್ತು ಸಿಆರ್‌ಪಿಸಿ ಸೆ. 164 ಅನ್ವಯ ಸುಳ್ಯ ಮ್ಯಾಜಿಸ್ಟ್ರೇಟರ ಸಮಕ್ಷಮ ಬಾಲಕಿ ನೀಡಿದ ಹೇಳಿಕೆ ಆರೋಪಿಗೆ ಶಿಕ್ಷೆಯಾಗುವಲ್ಲಿ ನಿರ್ಣಾಯಕವಾಗಿತ್ತು. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರುಣ ಸ್ವಾಮಿ ಸಿ. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News