ಗೌರಿ ಲಂಕೇಶ್ ಹತ್ಯೆ ಪ್ರಕರಣ : ಸುಳ್ಯದ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

Update: 2018-09-24 15:36 GMT

ಮಂಗಳೂರು, ಸೆ.24 : ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ಸುಳ್ಯ ತಾಲೂಕಿನ ನಾಲ್ಕು ಮಂದಿ ಶಂಕಿತ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನು ಮಂಗಳೂರಿನ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿ ಸೋಮವಾರ ಆದೇಶ ಹೊರಡಿಸಿದೆ.

ಸುಳ್ಯ ತಾಲೂಕಿನ ಚಾಂತಳ ನಿವಾಸಿ ಮೋಹನ್, ದೋಣಿತಳ್ಳ ಮೊಗ್ರ ನಿವಾಸಿ ಯತೀಶ್ ಎಂ., ಕೊಲ್ಲಮೊಗ್ರ ನಿವಾಸಿ ಯತೀನ್ ಬಿ. ಮತ್ತು ಮಡಪ್ಪಾಡಿ ಜಾಲುಮನೆ ನಿವಾಸಿ ಕುಮುದಾಕ್ಷರಿಗೆ ಎಸ್‌ಐಟಿ ಜು.27ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಈ ಯುವಕರು ಆ.7ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಗೌರಿ ಲಂಕೇಶ್ ಕೊಲೆ ಪ್ರಕರಣ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಕೆಲವು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ. ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸುವ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ ಆಕ್ಷೇಪಣೆ ಸಲ್ಲಿಸಿದ್ದರು.

ನಗರದ ನ್ಯಾಯಾಲಯವೂ ಅರ್ಜಿ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಬಹುದು ಎಂದು ಆರೋಪಿಗಳ ಪರ ವಕೀಲ ಎಸ್.ಪಿ.ಚೆಂಗಪ್ಪ ವಾದಿಸಿದ್ದರು. ಸೋಮವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶೆ ಶಾರದಾ ಬಿ. ನಾಲ್ವರು ಶಂಕಿತ ಆರೋಪಿಗಳ ಅರ್ಜಿಗಳನ್ನು ತಿರಸ್ಕರಿಸಿ ಆದೇಶ ಹೊರಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News