ರಾವಣ ಹುಟ್ಟಿದ್ದು ಲಂಕಾದಲ್ಲಲ್ಲ, ನೋಯ್ಡಾದಲ್ಲಿ: ಸುಬ್ರಮಣಿಯನ್ ಸ್ವಾಮಿ

Update: 2018-09-24 16:08 GMT

ಪಣಜಿ, ಸೆ.24: ಕಪ್ಪುಹಣ ದೇಶದಿಂದ ಹೊರಹೋಗುತ್ತಿರುವುದರಿಂದ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‍ ಸ್ವಾಮಿ ವಿಶ್ಲೇಷಿಸಿದ್ದಾರೆ.

"ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಮಹತ್ವ" ಎಂಬ ವಿಷಯದ ಬಗ್ಗೆ ಮರ್ಮಗೋವಾದಲ್ಲಿ ನೀಡಿದ ಉಪನ್ಯಾಸದಲ್ಲಿ ಸ್ವಾಮಿ ಈ ವ್ಯಾಖ್ಯಾನ ಮಾಡಿದರು.

ರೂಪಾಯಿ ಮೌಲ್ಯ ಕುಸಿತಕ್ಕೂ ಅಮೆರಿಕಕ್ಕೂ ಯಾವ ಸಂಬಂಧವೂ ಇಲ್ಲ. ಆದರೆ ಇದರ ಹಿಂದಿರುವ ಮುಖ್ಯ ಕಾರಣವೆಂದರೆ, ದೊಡ್ಡ ಪ್ರಮಾಣದ ಕಪ್ಪುಹಣ ದೇಶದಿಂದ ತೊಗಲುತ್ತಿರುವುದು ಎಂದು ಸ್ವಾಮಿ ಹೇಳಿದರು. ಡಾಲರ್‍ ನ ಎದುರು ರೂಪಾಯಿಯ ಅಧಿಕ ಪೂರೈಕೆ ಇರುವುದರಿಂದ, ಮೌಲ್ಯ ಕುಸಿದಿದೆ ಎಂದು ಸ್ವಾಮಿ ವಿವರಿಸಿದರು.

ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ರೂಪಾಯಿ ಮೌಲ್ಯದಲ್ಲಿ ಕುಸಿತ ಉಂಟಾಗಿದ್ದು, ಕಳೆದ ಜನವರಿಯಿಂದೀಚೆಗೆ ರೂಪಾಯಿ ಮೌಲ್ಯ ಶೇಕಡ 14ರಷ್ಟು ಕುಸಿದಿದೆ. ಏಪ್ರಿಲ್‍ನಿಂದ ಸೆಪ್ಟೆಂಬರ್ ನಡುವೆ ರೂಪಾಯಿ ಮೌಲ್ಯ ಪ್ರತಿ ಡಾಲರ್ ಎದುರು ಏಳು ರೂಪಾಯಿಯಷ್ಟು ಕುಸಿದಿದ್ದು, ಕಳೆದ ವಾರ ಒಂದು ಡಾಲರ್‍ಗೆ ರೂಪಾಯಿ ಮೌಲ್ಯ 73 ರೂಪಾಯಿ ಆಗಿತ್ತು.

ಸ್ವತಃ ಅರ್ಥಶಾಸ್ತ್ರಜ್ಞರಾಗಿರುವ ಸ್ವಾಮಿ, ಅಮೆರಿಕ ವಿಶ್ವದ ಮುಂದುವರಿದ ರಾಷ್ಟ್ರವಾಗಿ ಉಳಿಯುವವರೆಗೂ ಡಾಲರ್ ಅಂತರರಾಷ್ಟ್ರೀಯ ಆರ್ಥಿಕತೆಯನ್ನು ಆಳುತ್ತದೆ ಎಂದು ಪ್ರತಿಪಾದಿಸಿದರು.

ಇದೇ ಸಂದರ್ಭ ರಾಮಾಯಣದ ಬಗ್ಗೆ ಮಾತನಾಡಿದ ಅವರು, ರಾವಣನು ದಿಲ್ಲಿ ಸಮೀಪದ ನೋಯ್ಡಾದಲ್ಲಿ ಹುಟ್ಟಿದ್ದ ಹೊರತು ಲಂಕೆಯಲ್ಲಿ ಅಲ್ಲ ಎಂದು ಹೇಳಿದರು. “ದಿಲ್ಲಿ ಸಮೀಪದ ಬಿಸ್ರಖ್ ಎಂಬ ಗ್ರಾಮದಲ್ಲಿ ರಾವಣ ಜನಿಸಿದ” ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News