ರಾಜೀವ್ ಗಾಂಧಿ ಹತ್ಯೆ ಪ್ರಕರಣ: ರಾಜ್ಯಪಾಲರನ್ನು ಭೇಟಿಯಾದ ಅಪರಾಧಿಯ ತಾಯಿ

Update: 2018-09-24 16:08 GMT

ಚೆನ್ನೈ, ಸೆ. 24: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಅಪರಾಧಿಗಳಲ್ಲಿ ಓರ್ವರಾಗಿರುವ ಎ.ಜಿ. ಪೇರರಿವಾಲನ್ ಅವರ ತಾಯಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿಯಾಗಿ ಸಂಪುಟ ಶಿಫಾರಸಿನ ಹಿನ್ನೆಲೆಯಲ್ಲಿ ತನ್ನ ಪುತ್ರನನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ಪೇರರಿವಾಲನ್ ಆಲಿಯಾಸ್ ಅರಿವು ಅವರ ತಾಯಿ ಅರ್ಪುತಮ್ಮಾಲ್ ಚೆನ್ನೈಯಲ್ಲಿರುವ ರಾಜ್ ಭವನದಲ್ಲಿ ರಾಜ್ಯಪಾಲ ಪುರೋಹಿತ್ ಅವರನ್ನು ಭೇಟಿಯಾಗಿದ್ದಾರೆ. ಹಾಗೂ ಮನವಿಯೊಂದಿಗೆ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ರಾಜ್ಯಪಾಲರು ಆಗ್ರಹ ಸ್ವೀಕರಿಸಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಪುರೋಹಿತ್‌ಗೆ ಅವರು ಸಲ್ಲಿಸಿದ ದಾಖಲೆಗಳಲ್ಲಿ ಸಿಬಿಐ ನಡೆಸಿದ ಪ್ರಕರಣದ ತನಿಖೆಯಲ್ಲಿನ ಕೆಲವು ದೋಷಗಳ ಬಗ್ಗೆ ನ್ಯಾಯಮೂರ್ತಿ ಕೆ.ಟಿ. ಥೋಮಸ್ ಅಭಿಪ್ರಾಯ ಹಾಗೂ ಪರೋಲ್ ಹಾಗೂ ಅದನ್ನು ವಿಸ್ತರಿಸಿದ ಸಂದರ್ಭ ಅವರ ಪುತ್ರನ ನಡತೆಯ ವಿವರಗಳನ್ನು ದಾಖಲೆಗಳು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

ಪತಿಯ ಹಂತಕರ ಬಗ್ಗೆ ಉದಾರತೆ ತೋರಿಸುವಂತೆ ಹಾಗೂ ಅವರ ಶಿಕ್ಷೆಯ ಪ್ರಮಾಣ ಇಳಿಸಲು ಸಾಧ್ಯವಾಗಿಸುವಂತೆ ರಾಜೀವ್ ಗಾಂಧಿ ಅವರ ಪತ್ನಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಥೋಮಸ್ 2017ರಲ್ಲಿ ಪತ್ರ ಬರೆದಿದ್ದರು. ‘‘7 ಮಂದಿಯನ್ನು ಬಿಡುಗಡೆ ಮಾಡಲು ತಮಿಳುನಾಡು ಸರಕಾರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಕಡತಗಳನ್ನು ರಾಜಭವನಕ್ಕೆ ಕಳುಹಿಸಿದೆ. ಅವರ ಬಿಡುಗಡೆ ನಿಮ್ಮ ಸಹಿಗಾಗಿ ಕಾಯುತ್ತಿದೆ ಎಂಬುದು ನಿಮಗೆ ಗೊತ್ತು’’ ಎಂದು ಅರ್ಪುತಮ್ಮಾಳ್ ಹೇಳಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲು ತಮಿಳುನಾಡಿನ ಎಐಎಡಿಎಂಕೆ ಸರಕಾರ ಸೆಪ್ಟಂಬರ್ 9ರಂದು ನಿರ್ಣಯ ಅಂಗೀಕರಿಸಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News