ಉಡುಪಿ : ಕೊನೆಗೂ ಮುಚ್ಚಿತು 8 ದಶಕಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ

Update: 2018-09-24 17:36 GMT

ಉಡುಪಿ, ಸೆ.24: ಕಳೆದ ಸುಮಾರು ಎಂಟು ದಶಕಗಳಿಗೂ ಅಧಿಕ ಸಮಯದಿಂದ ಉಡುಪಿ ಜಿಲ್ಲೆ ಮಾತ್ರವಲ್ಲ ಆಸುಪಾಸಿನ ಜಿಲ್ಲೆಗಳ ಬಡವರ ಪಾಲಿಗೆ ‘ಸಂಜೀವಿನಿ’ಯಂತಿದ್ದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎಂದೇ ಕರೆಯಲಾಗುವ ‘ಹಾಜಿ ಅಬ್ದುಲ್ಲಾ ಶುಶ್ರೂಷಾಲಯ’ ಇಂದಿನಿಂದ ಬಾಗಿಲು ಮುಚ್ಚಿದೆ.

ನಾಳೆಯಿಂದ ಈ ಆಸ್ಪತ್ರೆ ಅಧಿಕೃತವಾಗಿ ಮೂಲತ: ಉಡುಪಿಯವರೇ ಆದ ಈಗ ಎನ್‌ಆರ್‌ಐ ಉದ್ಯಮಿಯಾಗಿರುವ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷ ಬಿ.ಆರ್.ಶೆಟ್ಟಿ ಅವರ ಬೆಂಗಳೂರು ಮೂಲದ ಬಿ.ಆರ್.ಎಸ್. ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಯವರು ಪಕ್ಕದಲ್ಲೇ ನಿರ್ಮಿಸಿರುವ ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾವಣೆಗೊಳ್ಳಲಿದೆ.

2017ರ ನವೆಂಬರ್ 19ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಉದ್ಘಾಟನೆಗೊಂಡಿರುವ ಈ ಆಸ್ಪತ್ರೆಯಲ್ಲಿ ಸರಕಾರದ ಒಡಂಬಡಿಕೆಯಂತೆ ಇದೇ ಜುಲೈ ತಿಂಗಳಿನಿಂದ ಹೊರರೋಗಿ ವಿಭಾಗವನ್ನು ಪ್ರಾರಂಭಿಸಲಾಗಿತ್ತು. ಆಗಲೇ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಭಾಗಶ: ಸೇವೆಯನ್ನು ಇಲ್ಲಿಗೆ ವರ್ಗಾಯಿಸಲಾಗಿತ್ತು.

ಇದೀಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆಯ ಆಯುಕ್ತರು ಆ.29ರಂದು ಕಳುಹಿಸಿದ ಆದೇಶದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮುಚ್ಚಿ, ಅಲ್ಲಿನ ಎಲ್ಲಾ ಹೊರರೋಗಿ, ಒಳರೋಗಿ ವಿಭಾಗ ಸೇರಿದಂತೆ ಎಲ್ಲಾ ಸೇವೆಗಳನ್ನು 200 ಹಾಸಿಗೆಗಳ ಅತ್ಯಾಧುನಿಕ ಹೊಸ ಆಸ್ಪತ್ರೆಗೆ ವರ್ಗಾಯಿಸುವಂತೆ ತಿಳಿಸಿದೆ. ಈ ಮೂಲಕ ಎಂಸಿಎಚ್ ಆಸ್ಪತ್ರೆಯನ್ನು ಶಾಶ್ವತವಾಗಿ ಮುಚ್ಚುವಂತೆ ಸೂಚಿಸಿದೆ.

ಉಡುಪಿಯ ದಾನಶೂರ ಕರ್ಣ ಎನಿಸಿದ್ದ ಹಾಜಿ ಅಬ್ದುಲ್ಲಾ ಅವರು 1930ರ ದಶಕದಲ್ಲಿ ಜಿಲ್ಲೆಯ ಬಡವರಿಗಾಗಿ ತನ್ನ ಜಾಗದಲ್ಲಿ ನಿರ್ಮಿಸಿ ಕೊಟ್ಟ ಹಾಜಿ ಅಬ್ದುಲ್ಲ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯ ಒಟ್ಟು ನಾಲ್ಕು ಎಕರೆ ವಿಸ್ತೀರ್ಣದ ಮೂರು ನಿವೇಶನಗಳನ್ನೊಳಗೊಂಡ ಜಮೀನನ್ನು ಡಾ.ಬಿ.ಆರ್. ಶೆಟ್ಟಿ ಅಧ್ಯಕ್ಷರಾಗಿರುವ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೇಟ್ ಲಿ.ಗೆ 30ವರ್ಷಗಳ ಸುದೀರ್ಘ ಅವಧಿಗೆ ಗುತ್ತಿಗೆ ಆಧಾರದಲ್ಲಿ (ಲೀಸ್) ನೀಡಲು ರಾಜ್ಯ ಸರಕಾರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿತ್ತು.

ಇದರಲ್ಲಿ ಈಗಿದ್ದ 70 ಹಾಸಿಗೆಗಳ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗಳ ಬದಲಿಗೆ ನಗರಸಭೆಯ ಎದುರಿನ ಮಹಾತ್ಮಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಶಾಲೆ)ಯ ಹಿಂಭಾಗದ ಜಾಗದಲ್ಲಿ 200ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆಯನ್ನು ನಿರ್ಮಿಸಿದ ಬಿ.ಆರ್.ಎಸ್. ಸಂಸ್ಥೆ ಈ ಆಸ್ಪತ್ರೆಗೆ ‘ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಎಂದು ನಾಮಕರಣ ಮಾಡಿದೆ. ಇಲ್ಲಿ ಈಗಿನಂತೆ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡಲಿದೆ ಎಂದು ಸರಕಾರ ಹೇಳಿಕೊಂಡು ಬಂದಿದೆ.

ಸಂಸ್ಥೆ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಈಗಿರುವ ಮಹಿಳಾ-ಮಕ್ಕಳ ಆಸ್ಪತ್ರೆಯನ್ನು ಕೆಡವಿ ಅಲ್ಲಿ 400 ಹಾಸಿಗೆಗಳ ಸಾಮರ್ಥ್ಯದ ಸೆಂಟರ್ ಆಫ್ ಎಕ್ಸಲೆನ್ಸ್ ಆಸ್ಪತ್ರೆ (ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಹಾಗೂ ಸಮುದಾಯ ಆರೋಗ್ಯ ಸೌಲಭ್ಯಗಳನ್ನು (ಅಲಂಕಾರ್ ಥಿಯೇಟರ್ ಬಲಭಾಗದ ಜಾಗದಲ್ಲಿ) ಒಳಗೊಂಡ ಕೇಂದ್ರವನ್ನು ಸಂಸ್ಥೆ ಶೀಘ್ರವೇ ನಿರ್ಮಿಸಲಿದೆ.

ನಾಲ್ವರು ವೈದ್ಯರ ಎರವಲು ಸೇವೆ: ಈಗಿರುವ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರು ಮಂದಿ ತಜ್ಞ ವೈದ್ಯರು ಸೇರಿದಂತೆ ಒಟ್ಟು 31 ಮಂದಿ ಸಿಬ್ಬಂದಿಗಳು ಸೇವಾ ನಿರತರಾಗಿದ್ದಾರೆ. ಇವರಲ್ಲಿ ನಾಲ್ವರು ವೈದ್ಯರ ( ತಲಾ ಇಬ್ಬರು ಮಕ್ಕಳ ತಜ್ಞರು ಹಾಗೂ ಇಬ್ಬರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು) ಸೇವೆಯನ್ನು ತಾತ್ಕಾಲಿಕ ನೆಲೆಯಲ್ಲಿ ಎರಡು ತಿಂಗಳ ಮಟ್ಟಿಗೆ ಹೊಸ ಆಸ್ಪತ್ರೆಗೆ ನಿಯೋಜಿಸಿ ಸರಕಾರ ಆದೇಶ ನೀಡಿದೆ.

ಉಳಿದಂತೆ ಇಬ್ಬರು ವೈದ್ಯರು ಸೇರಿದಂತೆ ಉಳಿದ 27 ಮಂದಿಯ ಸೇವೆಯ ಕುರಿತಂತೆ ಯಾವುದೇ ಆದೇಶ ಇಲಾಖೆಯಿಂದ ಇದುವರೆಗೆ ಬಂದಿಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆ ಇದ್ದು, ಇವರೆಲ್ಲರನ್ನು ಜಿಲ್ಲಾಸ್ಪತ್ರೆಗೆ ನಿಯೋಜಿಸುವಂತೆ ಈ ಮೊದಲೊಮ್ಮೆ ತಾವು ಸರಕಾರಕ್ಕೆ ಪತ್ರ ಬರೆದಿದ್ದು, ಇಂದು ಮತ್ತೊಂದು ಪತ್ರವನ್ನು ಬರೆದಿದ್ದೇನೆ ಎಂದವರು ತಿಳಿಸಿದರು. ಇವರಲ್ಲಿ ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ ಹಾಗೂ ಇತರ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಸೇರಿದ್ದಾರೆ.

ನಾಳೆಯಿಂದ ಸರಕಾರಿ ಮಹಿಳಾ ಆಸ್ಪತ್ರೆಯಲ್ಲಿ ಯಾವುದೇ ಹೊಸ ರೋಗಿಗಳ ಪರೀಕ್ಷೆ ನಡೆಯುವುದಿಲ್ಲ. ಅವರೆಲ್ಲರೂ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗುವುದು. ಈಗ ಆಸ್ಪತ್ರೆಯಲ್ಲಿರುವ ರೋಗಿಗಳಲ್ಲಿ 2ರಿಂದ 4ದಿನದೊಳಗೆ ಡಿಸ್‌ಚಾರ್ಜ್ ಆಗಲಿರುವ ರೋಗಿಗಳನ್ನು ಹೊರತು ಪಡಿಸಿ ಉಳಿದವರನ್ನೆಲ್ಲಾ ಅಲ್ಲಿಗೆ ವರ್ಗಾಯಿಸಲಾಗುವುದು ಎಂದೂ ಡಾ.ನಾಯಕ್ ವಿವರಿಸಿದರು.

ಇನ್ನು ಆಸ್ಪತ್ರೆಯ ಕೆಲವೊಂದು ಉಪಕರಣಗಳನ್ನು ವಿಜಯಪುರದ ಆಸ್ಪತ್ರೆಗೆ ಕಳುಹಿಸುವಂತೆ ಇಲಾಖೆಯಿಂದ ಸೂಚನೆ ಬಂದಿದೆ. ಅವುಗಳನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಇನ್ನುಳಿದವುಗಳ ಬಗ್ಗೆ ಇಲಾಖೆಯ ಸೂಚನೆಯಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಹೊಸ ಆಸ್ಪತ್ರೆಯಲ್ಲಿ ಐವರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ನೇಮಕಗೊಂಡಿದ್ದರೂ, ತುರ್ತು ಸಂದರ್ಭಕ್ಕೆ ಅಗತ್ಯ ಬೀಳುವ ನಿರೀಕ್ಷೆಯಲ್ಲಿ ಇಬ್ಬರು ಸರಕಾರಿ ವೈದ್ಯರನ್ನು ತಾತ್ಕಾಲಿಕ ನೆಲೆಯಲ್ಲಿ ನಿಯೋಜಿಸಲಾಗಿದೆ. ಆದರೆ ಅಲ್ಲಿಗೆ ಅರ್ಹ ಮಕ್ಕಳ ತಜ್ಞರು ಲಭ್ಯವಿರದೇ ಇರುವುದರಿಂದ ಇಲ್ಲಿಂದ ಇಬ್ಬರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಹಾಜಿ ಅಬ್ದುಲ್ಲಾರ ಆಶಯದಂತೆ ಕಳೆದ ಎಂಟು ದಶಕಗಳಿಂದ ಉಡುಪಿಯಲ್ಲಿ ಸರಕಾರಿ ವ್ಯವಸ್ಥೆಯೊಳಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಬಡ ಹಾಗೂ ಮದ್ಯಮ ವರ್ಗದ ಜನರಿಗೆ ‘ಆರೋಗ್ಯ ಸಂಜೀವಿನಿ’ಯಂತಿದ್ದ ಆಸ್ಪತ್ರೆಯೊಂದು ಇದೀಗ ಖಾಸಗಿಯವರ ಸೊತ್ತಾಗಿ ಇದರಲ್ಲಿ ಬಡವರಿಗೆ ಎಷ್ಟರ ಮಟ್ಟಿಗೆ ‘ಉಚಿತ ಸೇವೆ’ ಲಭ್ಯವಾಗುತ್ತೆ ಎಂಬ ಬಗ್ಗೆ ಈಗಲೇ ಹೇಳುವಂತಿಲ್ಲ.

ಉಡುಪಿಯ ಚಿಂತಕ ಜಿ.ರಾಜಶೇಖರ್ ಹೇಳಿದಂತೆ, ಸರಕಾರ ನೀಡುವ ಸವಲತ್ತು ಎಂಬುದು ಪ್ರಜೆಗಳ ಹಕ್ಕು. ಆದರೆ ಖಾಸಗಿಯವರು ನೀಡುವುದು ದಾನವಾಗುತ್ತದೆ. ಬಡವರು ಈವರೆಗೆ ಹಕ್ಕಿನಿಂದ ಪಡೆಯುತಿದ್ದ ಸರಕಾರಿ ಆಸ್ಪತ್ರೆಯ ಸೌಲಭ್ಯಗಳು ಇನ್ನು ಮುಂದೆ ಹೊಸ ಆಸ್ಪತ್ರೆಯಲ್ಲಿ ಮುಂದುವರಿಯುದೇ ಇಲ್ಲ, ಬಡ ರೋಗಿಗಳು ಅತಂತ್ರರಾಗಿ ಬೀದಿಗೆ ಬೀಳುವಂತಾಗುವುದೊ ಎಂಬುದನ್ನು ಕಾದು ನೋಡಬೇಕಿದೆ.

ಮೂರು ವರ್ಷಗಳಲ್ಲಿ 4.64 ಲಕ್ಷ ಮಂದಿಗೆ ಚಿಕಿತ್ಸೆ
ಕಳೆದ ಎಂಟು ದಶಕಗಳಿಂದ ನಗರದ ಕೇಂದ್ರ ಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 4,64,176 ಮಂದಿ ಬಡ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 4,32,756 ಮಂದಿ ಹೊರರೋಗಿಗಳಾಗಿ ಹಾಗೂ 31,420 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

2016-17ನೇ ಸಾಲಿನಲ್ಲಿ 1,67,203 ಹೊರರೋಗಿಗಳು, 11,925 ಒಳರೋಗಿಗಳು, 2017-18ನೇ ಸಾಲಿನಲ್ಲಿ 1,79,761 ಹೊರರೋಗಿಗಳು, 13,708 ಒಳರೋಗಿಗಳು ಹಾಗೂ 2018-19ನೇ ಸಾಲಿನ ಆಗಸ್ಟ್ ತಿಂಗಳವ ರೆಗೆ 85,792 ಮಂದಿ ಹೊರರೋಗಿಗಳು ಮತ್ತು 5,787 ಮಂದಿ ಒಳರೋಗಿಗಳು ಇಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಅಂಕಿಅಂಶಗಳು ತಿಳಿಸುತ್ತವೆ.

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News