ಸಾಹಿತಿ ಗಿರೀಶ್ ಕಾರ್ನಾಡ್ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ: ಪುತ್ತೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರತಿಭಟನೆ

Update: 2018-09-25 13:50 GMT

ಪುತ್ತೂರು,ಸೆ.25 : ನಕ್ಸಲೀಯರಿಗೆ ಬೆಂಬಲ ನೀಡಿದ ಗಿರೀಶ್ ಕಾರ್ನಾಡ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮತ್ತು ಸನಾತನ ಸಂಸ್ಥೆಯ ಮೇಲಿನ ಸುಳ್ಳು ಆರೋಪವನ್ನು ಖಂಡಿಸಿ ಮಂಗಳವಾರ ಪುತ್ತೂರು ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಕಟ್ಟೆಯ ಮುಂಬಾಗ ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ 'ರಾಷ್ಟ್ರೀಯ ಹಿಂದೂ ಆಂದೋಲನ-ಪ್ರತಿಭಟನೆ' ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಉಪೇಂದ್ರ ಆಚಾರ್ಯ ಅವರು 'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನೂ ಕೂಡ ನಗರ ನಕ್ಸಲ್ ಎಂಬ ಫಲಕವನ್ನು ತನ್ನ ಕೊರಳಿನಲ್ಲಿ ಧರಿಸಿಕೊಂಡು ನಕ್ಸಲರಿಗೆ ಬೆಂಬಲ ನೀಡಿದ್ದು, ದೇಶದ್ರೋಹಿ ನಕ್ಸಲವಾದಿಗಳ ಸಮರ್ಥನೆ ಮಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಕಾನೂನು ರಚಿಸಬೇಕು ಮತ್ತು ನಗರವಾಸಿ ನಕ್ಸಲವಾದಿಗಳೊಂದಿಗೆ ದೇಶಾದ್ಯಂತ ನೆಲೆಯೂರಿರುವ ನಕ್ಸಲವಾದಿಗಳನ್ನು ನಾಶಪಡಿಸಲು ಸೈನ್ಯ ಮತ್ತು ಪೊಲೀಸರಿಗೆ ಸರ್ವಾಧಿಕಾರ ನೀಡಬೇಕು ಎಂದು ಆಗ್ರಹಿಸಿದರು. 

ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ದಯಾನಂದ ಹೆಗ್ಡೆ, ಕೇಶವ ಗೌಡ, ಜನಾರ್ದನ,  ಮಾಧವ ಎಸ್. ರೈ ಕುಂಬ್ರ, ಹರಿಪ್ರಸಾದ್ ಶೆಟ್ಟಿ,ಚೇತನ ಪ್ರಭು,ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. 

ಪ್ರತಿಭಟನಾಕಾರರು ಬಳಿಕ ಹಿಂದೂ ವಿರೋಧಿ ಧೋರಣೆ ಅನುಸುತ್ತಿರುವ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News