ನಗರ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಶ್ರಮವಿದೆ :ಎ.ಸಿ.ಕೃಷ್ಣಮೂರ್ತಿ

Update: 2018-09-25 13:52 GMT

ಪುತ್ತೂರು,ಸೆ.25; ನಗರ ಸ್ವಚ್ಛತೆಯ ಹಿಂದೆ ಪೌರಕಾರ್ಮಿಕರ ಶ್ರಮ ಮತ್ತು ಶ್ರದ್ಧೆಯಿದೆ. ಪುತ್ತೂರು ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕ ವೃತ್ತಿಯ ಬಗ್ಗೆ ಯಾವುದೇ ಕೀಳರಿಮೆ ಬೇಡ. ವ್ಯಕ್ತಿಯ ಗುರುತಿಸುವಿಕೆಯಲ್ಲಿ ಪೌರಕಾರ್ಮಿಕರನ್ನು ಅಗೌರವದಿಂದ ಕಾಣದೆ ಅವರ ವೃತ್ತಿಗೆ ಗೌರವ ನೀಡಬೇಕು. ಯಾವುದೇ ಲೋಪ ಇಲ್ಲದ ಕಾರ್ಮಿಕರ ಶ್ರದ್ಧೆಯ ಕಾರ್ಯ ಅತ್ಯಂತ ಶ್ರೇಷ್ಟವಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತರಾದ ಎಚ್.ಕೆ.ಕೃಷ್ಣಮೂರ್ತಿ ಹೇಳಿದರು.

ಪುತ್ತೂರು ಪುರಭವನದಲ್ಲಿ ಮಂಗಳವಾರ ನಡೆದ ನಗರಸಭೆಯ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬದಲಾವಣೆ ಅಗತ್ಯ. ಪೌರಕಾರ್ಮಿಕರ ಬದುಕಿನಲ್ಲೂ ಬದಲಾವಣೆ ಬರಲೇಬೇಕು. ಆದರೆ ನಿಮ್ಮ ಹವ್ಯಾಸಗಳು ಆರೋಗ್ಯಕರವಾಗಿದ್ದರೆ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪೌರಕಾರ್ಮಿಕರೊಂದಿಗೆ ಪ್ರೀತಿಯಿಂದ ವ್ಯವಹರಿಸಿದರೆ ಅವರು ಮತ್ತಷ್ಟು ಸಂತೋಷಪಟ್ಟು ಕೆಲಸ ನಿರ್ವಹಣೆ ಮಾಡುತ್ತಾರೆ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ಪೌರಕಾರ್ಮಿಕರ ದಿನವನ್ನು ಸರಕಾರದ ಆದೇಶದ ಪ್ರಕಾರ ಸೆ.23ರಂದು ನಡೆಸಬೇಕಿತ್ತು. ಆದರೆ ಆದಿನ ರವಿವಾರ ಆದ ಕಾರಣ ಸೆ.25ರಂದು ಆಚರಿಸುತ್ತಿದ್ದೇವೆ. ನಗರಸಭೆಯಲ್ಲಿ 16 ಮಂದಿ ಖಾಯಂ ಹಾಗೂ 25 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿದ್ದಾರೆ. ಸರಕಾರದಿಂದ ರೂ.3550 ಗೌರವಧನ ಈ ದಿನಾಚರಣೆಯ ಹಿನ್ನಲೆಯಲ್ಲಿ ಖಾಯಂ ಪೌರಕಾರ್ಮಿಕರಿಗೆ ನೀಡಲಿದ್ದೇವೆ. ಪುತ್ತೂರು ನಗರದ ಸ್ವಚ್ಛತೆಯ ರೂವಾರಿಗಳು ಈ ಪೌರಕಾರ್ಮಿಕರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪೌರಕಾರ್ಮಿಕರಾದ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಗುತ್ತಿಗೆದಾರ ಚಿದಾನಂದ್, ಹಾಗೂ ಅವರ ಸಹಾಯಕ ಗೋಪಾಲ್ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ವಿಭಾಗದ ರವಿ ಸ್ವಾಗತಿಸಿದರು. ನಗರಸಭೆಯ ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು ನಿರೂಪಿಸಿ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಪೌರಕಾರ್ಮಿಕರಿಗೆ ವಿವಿಧ ಒಳಾಂಗಣ ಆಟಗಳನ್ನು ನಡೆಸಲಾಯಿತು. ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News