ಉಡುಪಿ: ಸೆ.27ರಿಂದ 30ರವರೆಗೆ ಪರ್ಯಟನ ದಿನ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ

Update: 2018-09-25 14:23 GMT

ಉಡುಪಿ, ಸೆ.25: ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಮಲ್ಪೆ ಅಭಿವೃದ್ಧಿ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ನಿರ್ಮಿತಿ ಕೇಂದ್ರ ಉಡುಪಿ, ನೆಹರು ಯುವ ಕೇಂದ್ರ ಉಡುಪಿ, ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಹಾಗೂ ವೆಲ್‌ಕಮ್ ಗ್ರೂಪ್‌ಗಳ ಸಹಭಾಗಿತ್ವದಲ್ಲಿ ಮಲ್ಪೆ ಬೀಚ್‌ನಲ್ಲಿ ಸೆ.27ರಿಂದ 30ರವರೆಗೆ ಪರ್ಯಟನ ದಿನ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಹಮ್ಮಿಕೊಂಡಿದೆ.

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಅವರು ಮಣಿಪಾಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನಾಲ್ಕು ದಿನಗಳ ಈ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮಲ್ಪೆ ಬೀಚ್ ಅಲ್ಲದೇ, ಕಾಪು ಬೀಚ್, ಪಡುಬಿದ್ರಿ ಬೀಚ್, ಕುಂದಾಪುರ-ಕೋಡಿ ಬೀಚ್, ಕೋಟೇಶ್ವರದ ಯುವ ಮೆರಿಡಿಯನ್ ಗಳಲ್ಲಿ ಏಕಕಾಲದಲ್ಲಿ ನಡೆಯಲಿವೆ ಎಂದರು.

ಈ ಬಾರಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ರಾಜ್ಯ ಅಬಕಾರಿ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಿರುವ ದ್ರಾಕ್ಷಾರಸ ಉತ್ಸವ ವಿಶೇಷ ಆಕರ್ಷಣೆಯಾಗಿದೆ. ಇದರಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವೈನ್‌ಗಳ ಪ್ರದರ್ಶನ ಹಾಗೂ ಮಾರಾಟ, ಇವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ವೈನ್ ತಯಾರಿಕೆಗೆ ಮಾಹಿತಿ, ಗ್ರೇಪ್ ಸ್ಟಾಂಪಿಂಗ್ ಇರಲಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಎಂಟು ಮಂದಿ ವೈನರಿಗಳು ಭಾಗವಹಿಸಲಿದ್ದಾರೆ ಎಂದು ಅನಿತಾ ತಿಳಿಸಿದರು.

ಹಂಪಿಯ ಕಿಷ್ಕಿಂದ ಟ್ರಸ್ಟ್‌ನ ಸ್ವಸಹಾಯ ಸಂಘದವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ, ಬಾಳೆದಿಂಡಿನ ನಾರಿನಿಂದ ತಯಾರಿಸಿದ ವಿವಿಧ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಸೆ.30ರಂದು ಬೆಳಗ್ಗೆ 7:00ಗಂಟೆಗೆ ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ಸಾರ್ವಜನಿಕರಿಗಾಗಿ ಮಲ್ಪೆ ಸಮುದ್ರ ಕಿನಾರೆಯಲ್ಲಿ ಬೀಚ್ ಯೋಗವನ್ನು ಆಯೋಜಿಸಲಾಗಿದೆ ಎಂದರು.

ಇದರೊಂದಿಗೆ ಸರ್ಫಿಂಗ್ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಸೆ.27ರಂದು ಮಲ್ಪೆ ಬೀಚ್‌ನಲ್ಲಿ, 28ರಂದು ಕಾಪು, 29 ಪಡುಬಿದ್ರಿ ಹಾಗೂ 30ರಂದು ಕುಂದಾಪುರ ಕೋಡಿ ಬೀಚ್‌ನಲ್ಲಿ ಬೆಳಗ್ಗೆ 7:30ರಿಂದ 10:30ರವರೆಗೆ ನಡೆಯಲಿದೆ. ಸೆ.29ರಂದು ಸಂಜೆ 7:00ರಿಂದ ತರಂಗ ರಂಗ ಕಡಲ ಮೇಲೆ ಕಲಾಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅನಿತಾ ವಿವರಿಸಿದರು.

ಸೆ.30ರಂದು ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ಬೆಳಗ್ಗೆ 7:00ಕ್ಕೆ ಸೈಕ್ಲಿಂಗ್ ಸ್ಪರ್ಧೆ ಹಾಗೂ 8:00ಕ್ಕೆ ಅಲ್ಲಿನ ಹೆಲಿಪ್ಯಾಡ್ ಮೈದಾನದಲ್ಲಿ ರಿಮೋಟ್ ಕಂಟ್ರೋಲ್ ಏರ್‌ಶೋ ಪ್ರದರ್ಶನವಿರುತ್ತದೆ. ಕೊನೆಯ ದಿನದಂದು ಬೆಳಗ್ಗೆ 10ರಿಂದ ಎಲ್ಲಾಬೀಚ್‌ಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದರೊಂದಿಗೆ ಪ್ರತಿದಿನ ಮಲ್ಪೆ ಬೀಚ್‌ನಲ್ಲಿ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಖಾದ್ಯಗಳು ಮತ್ತು ವಿಶಿಷ್ಟ ಆಹಾರ ಪದಾರ್ಥಗಳನ್ನೊಳಗೊಂಡ ಆಹಾರ ಮೇಳೆ ಪ್ರತಿದಿನ ಸಂಜೆ 6:30ರಿಂದ ರಾತ್ರಿ 10:30ರವರೆಗೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮ, ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್‌ಕುಮಾರ್ ಶೆಟ್ಟಿ, ಯತೀಶ್ ಬೈಕಂಪಾಡಿ, ಮನೋಹರ ಶೆಟ್ಟಿ, ನಾಗರಾಜ ಬಲ್ಲಾಳ್, ಸುದೇಶ್ ಶೆಟ್ಟಿ, ಜನಾರ್ದನ ಎಸ್., ಲಕ್ಷ್ಮಿಮಂಜು ಕೊಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News