ಮಲ್ಪೆ: ಸೆ.27ರಿಂದ ಮೊದಲ ರಾಷ್ಟ್ರೀಯ ಪ್ಯಾರಾ ಬೀಚ್ ವಾಲಿಬಾಲ್

Update: 2018-09-25 14:40 GMT

ಉಡುಪಿ, ಸೆ.25: ಭಾರತೀಯ ಪ್ಯಾರಾಲಿಂಪಿಕ್ಸ್ ವಾಲಿಬಾಲ್ ಫೆಡರೇಷನ್‌ನ ಆಶ್ರಯದಲ್ಲಿ ಮೊತ್ತಮೊದಲ ಪ್ಯಾರಾ ಬೀಚ್ ವಾಲಿಬಾಲ್ ಸೀನಿಯರ್ ಸ್ಟಾಂಡಿಂಗ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ಸೆ.27ರಿಂದ 29ರವರೆಗೆ ಮಲ್ಪೆಯ ಸಮುದ್ರ ಕಿನಾರೆಯಲ್ಲಿ ನಡೆಯಲಿದೆ ಎಂದು ಫೆಡರೇಷನ್‌ನ ಅಧ್ಯಕ್ಷ ಎಚ್.ಚಂದ್ರಶೇಖರ್ ತಿಳಿಸಿದ್ದಾರೆ.

ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 16 ವಿಕಲಚೇತನರ ಪ್ಯಾರಾ ಬೀಚ್ ವಾಲಿಬಾಲ್ ತಂಡಗಳು ಮೂರು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿವೆ. ವಿಕಲಚೇತನರ ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆಯ ಸಹಯೋಗದೊಂದಿಗೆ ಈ ಟೂರ್ನಿಯನ್ನು ಮೊದಲ ಬಾರಿ ಕರ್ನಾಟಕದ ಕರಾವಳಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಕರ್ನಾಟಕ, ಗೋವಾ, ತೆಲಂಗಾಣ, ತಮಿಳುನಾಡು, ಪಾಂಡಿಚೇರಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಖಾಂಡ, ರಾಜಸ್ತಾನ, ಹರ್ಯಾಣ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಜಾರ್ಖಂಡ್ ಹಾಗೂ ದಿಲ್ಲಿ ತಂಡಗಳು ಈಗಾಗಲೇ ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. ಪ್ರತಿ ರಾಜ್ಯದಿಂದ ಎರಡು ತಂಡಗಳು ಆಡಬಹುದು ಎಂದು ಚಂದ್ರಶೇಖರ್ ತಿಳಿಸಿದರು.

ಹೆಚ್ಚಾಗಿ ಬೀಚ್‌ನಲ್ಲಿ ಆಡುವ ಈ ವಾಲಿಬಾಲ್‌ನ ಒಂದು ತಂಡದಲ್ಲಿ ಇಬ್ಬರು ಆಟಗಾರರಿರುತ್ತಾರೆ. ಆದರೆ ಇದು ವಿಕಲಚೇತನರಿಗಾಗಿ ನಡೆಯುವ ಸ್ಪರ್ಧೆಯಾದ ಕಾರಣ ತಂಡದಲ್ಲಿ ತಲಾ ಮೂವರು ಆಟಗಾರರಿರುತ್ತಾರೆ. ಇವರು ಕುಳಿತು ಮತ್ತು ನಿಂತು ಆಡುತ್ತಾರೆ. ಮಲ್ಪೆಯಲ್ಲಿ ನಡೆಯಲಿರುವುದು ನಿಂತು ಆಡುವ ವಾಲಿಬಾಲ್ ಆಟವಾಗಿದೆ ಎಂದು ಚಂದ್ರಶೇಖರ್ ವಿವರಿಸಿದರು.

ಪ್ರತಿ ತಂಡದಲ್ಲಿ ಮೂವರು ಪುರುಷ ಆಟಗಾರರಿರಬಹುದು. ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯೂ ಇರಬಹುದು. ಆದರೆ ಬೀಚ್ ವಾಲಿಬಾಲ್‌ನಲ್ಲಿರುವ ವಸ್ತ್ರಸಂಹಿತೆಯಿಂದ ಭಾರತದಲ್ಲಿ ಮಹಿಳೆಯರು ಈ ಆಟಕ್ಕೆ ಬರುವುದು ತೀರಾ ಅಪರೂಪ ಎಂದರು.

ಕರಾವಳಿಯ ತೀರ ಪ್ರದೇಶದಲ್ಲಿರುವ ಯುವಕರು ಈ ಆಟದಲ್ಲಿ ಹೆಚ್ಚು ಆಸಕ್ತಿ ತೋರಿಸಬೇಕು. ಇದಕ್ಕಾಗಿ ನಾಳೆ ಮಲ್ಪೆ ಬೀಚ್‌ನಲ್ಲಿ ಬೆಳಗ್ಗೆಯಿಂದ ಸಾರ್ವಜನಿಕರಿಗಾಗಿ ಆಟದ ಪ್ರಾತ್ಯಕ್ಷಿಕೆ ಇರುತ್ತದೆ. ಆಸಕ್ತಿ ಇರುವ ತರುಣರು ಇದರಲ್ಲಿ ಭಾಗವಹಿಸಬಹುದು ಎಂದು ಚಂದ್ರಶೇಖರ್ ತಿಳಿಸಿದರು.

ಚಾಂಪಿಯನ್‌ಷಿಪ್‌ನ್ನು ಅ.27ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಉದ್ಘಾಟಿಸುವರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರಬಾಬು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಒ ಶಿವಾನಂದ ಕಾಪಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.ಸಮಾರೋಪ ಸಮಾರಂಭ ಸೆ.29ರಂದು ಸಂಜೆ ನಡೆಯಲಿದೆ.

ಸ್ಪರ್ಧೆಗಳನ್ನು ವಿಶ್ವ ಪ್ಯಾರಾ ವಾಲಿಬಾಲ್ ನಿಯಮದಡಿ ಆಡಲಾಗುವುದು. ಒಟ್ಟು ಒಂದು ಲಕ್ಷ ರೂ.ಬಹುಮಾನ ನಿಧಿಯನ್ನು ವಿಜೇತರಿಗೆ ವಿತರಿಸಲಾಗುವುದು. ಸ್ಪರ್ಧೆಯ ಕೊನೆಯ ಭಾರತೀಯ ರಾಷ್ಟ್ರೀಯ ಪ್ಯಾರಾ ಬೀಚ್ ವಾಲಿಬಾಲ್ ತಂಡವನ್ನು ಆಯ್ಕೆ ಮಾಡಲಾಗುವುದು. ಈ ತಂಡ 2019ರ ಫೆ. ತಿಂಗಳಲ್ಲಿ ಗೋವಾದಲ್ಲಿ ನಡೆಯುವ ವಿಶ್ವ ಪ್ಯಾರಾ ಬೀಚ್ ವಾಲಿಬಾಲ್ ಟೂರ್ನಿಯಲ್ಲಿ ಭಾಗವಹಿಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌ಐಸಿಎಫ್‌ನ ನಿರ್ದೇಶಕ ಡಾ.ಜಗನ್ನಾಥನ್, ಫೆಡರೇಷನ್‌ನ ಮಾರ್ಕೆಟಿಂಗ್ ಮುಖ್ಯಸ್ಥ ರಂಜಿತ್ ಮಾರ್ಟಿನ್, ಶಿವಕುಮಾರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ನಗರಸಭಾ ಪೌರಾಯುಕ್ತ ಜನಾರ್ದನ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಡಾ.ರೋಶನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News