ಗಾಝಾ ಪಟ್ಟಿಯ ಆರ್ಥಿಕತೆ ಸಂಪೂರ್ಣ ಕುಸಿತ: ವಿಶ್ವಸಂಸ್ಥೆಯ ವರದಿ ಎಚ್ಚರಿಕೆ

Update: 2018-09-25 14:47 GMT

ಜೆರುಸಲೇಂ, ಸೆ. 25: ಫೆಲೆಸ್ತೀನ್‌ನ ಗಾಝಾ ಪಟ್ಟಿಯ ಆರ್ಥಿಕತೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಮಂಗಳವಾರ ಎಚ್ಚರಿಸಿದೆ.

‘ತಕ್ಷಣದ ಕುಸಿತ’ವನ್ನು ತಡೆಯಲು ಇಸ್ರೇಲ್ ಮತ್ತು ಅಂತಾರಾಷ್ಟ್ರೀಯ ಸಮುದಾಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅದು ಕರೆ ನೀಡಿದೆ. ಗಾಝಾದ ಆರ್ಥಿಕತೆ 2018ರ ಮೊದಲ ತ್ರೈಮಾಸಿಕದಲ್ಲಿ 6 ಶೇಕಡದಷ್ಟು ಕುಸಿದಿದೆ ಎಂದು ವರದಿ ತಿಳಿಸಿದೆ.

ಅಲ್ಲಿ ಈಗ 50 ಶೇಕಡಕ್ಕೂ ಅಧಿಕ ನಿರುದ್ಯೋಗಿಗಳಿದ್ದಾರೆ ಎಂದಿರುವ ವರದಿ, ಗಾಝಾದ ಯುವಕರ ಪೈಕಿ 70 ಶೇಕಡಕ್ಕೂ ಅಧಿಕ ಮಂದಿ ನಿರುದ್ಯೋಗಿಗಳು ಎಂದಿದೆ.

ಗಾಝಾದ ಆರ್ಥಿಕತೆ ಕುಸಿತಕ್ಕೆ ವರದಿಯು ಹಲವು ಕಾರಣಗಳನ್ನು ಪಟ್ಟಿಮಾಡಿದೆ. ಅವುಗಳ ಪೈಕಿ ಮುಖ್ಯವಾಗಿರುವುದು, ಗಾಝಾ ಪಟ್ಟಿಯ ಹಮಾಸ್ ಆಡಳಿತಗಾರರ ವಿರುದ್ಧ ಇಸ್ರೇಲ್ ವಿಧಿಸಿರುವ 10 ವರ್ಷಕ್ಕೂ ಅಧಿಕ ಅವಧಿಯ ಆರ್ಥಿಕ ದಿಗ್ಬಂಧನ.

ಫೆಲೆಸ್ತೀನ್ ಪ್ರಾಧಿಕಾರವು ಗಾಝಾ ಪಟ್ಟಿಯ ಬಜೆಟ್ ಕಡಿತ ಮಾಡಿರುವುದು ಹಾಗೂ ಫೆಲೆಸ್ತೀನಿಯರಿಗೆ ಲಭಿಸುತ್ತಿರುವ ಅಂತಾರಾಷ್ಟ್ರೀಯ ನೆರವಿನಲ್ಲಿ ಕಡಿವಾಗಿರುವುದು- ಆರ್ಥಿಕ ಕುಸಿತಕ್ಕೆ ಇತರ ಕಾರಣಗಳು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News