ಸುಸ್ಥಿರ ಕೃಷಿಯೋದ್ಯಮಕ್ಕೆ ಮಾರ್ಕೆಟಿಂಗ್ ಮುಖ್ಯ: ಡಾ.ರಮೇಶ್

Update: 2018-09-25 15:17 GMT

ನಿಟ್ಟೆ, ಸೆ.25: ಕೃಷಿ ಎಂಬುದು ಅತ್ಯಂತ ಸಂಕೀರ್ಣವಾದ ವೃತ್ತಿ. ಇದರ ಪ್ರತಿಯೊಂದು ಹಂತದಲ್ಲೂ ಸಂಕಷ್ಟಗಳು ಹಾಗೂ ಸವಾಲುಗಳು ಎದುರಾಗುತ್ತವೆ. ಕೃಷಿ ಚಟುವಟಿಕೆ ಹಾಗೂ ಕೃಷಿಯೋದ್ಯಮದಲ್ಲಿ ‘ರಿಸ್ಕ್’ ಎಂಬುದು ಒಂದು ಭಾಗವಾಗಿಯೇ ಇರುತ್ತದೆ. ಇವೆಲ್ಲದರ ಹೊರತಾಗಿಯೂ ದೇಶದಲ್ಲಿ ಕೃಷಿ ಹಾಗೂ ಕೃಷಿಯೋದ್ಯಮಗಳೆರಡೂ ಉಳಿದು ಪ್ರಗತಿಯನ್ನು ಸಾದಿಸಿವೆ ಎಂದು ಜೈಪುರದ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ (ಎನ್‌ಐಎಎಂ) ನಿರ್ದೇಶಕ ಡಾ.ರಮೇಶ್ ಮಿತ್ತಲ್ ಹೇಳಿದ್ದಾರೆ.

ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಜೈಪುರದ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್‌ನ ಸಹಯೋಗದೊಂದಿಗೆ ಮಂಗಳವಾರ ತನ್ನ ಸಂಸ್ಥೆಯಲ್ಲಿ ಆಯೋಜಿಸಿದ ಎರಡು ದಿನಗಳ ‘ಕೃಷಿಯೋದ್ಯಮದಲ್ಲಿ ಡಿಜಿಟಲ್ ಮಾರ್ಕೆಟಿಂಗ್’ಕುರಿತ ಎರಡು ದಿನಗಳ ನಿಟ್ಟೆ ರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಜೆಕೆಎಸ್‌ಎಚ್‌ಐಎಂ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿ ದುರಾದೃಷ್ಟವಶಾತ್ ಕೃಷಿ ಚಟುವಟಿಕೆಗಳು ಋತುವಿಗನುಗುಣವಾಗಿ ನಡೆಯುತ್ತವೆ. ಇಂದಿನ ಆಧುನಿಕ ಡಿಜಿಟಲ್ ಹೈಟೆಕ್ ಯುಗದಲ್ಲಿ ಕೃಷಿಯೋದ್ಯಮವನ್ನು ಸುಸ್ಥಿರಗೊಳಿಸುವಲ್ಲಿ ಅಗ್ರಿ ಮಾರ್ಕೆಟಿಂಗ್‌ಗೆ ಡಿಜಿಟಲ್‌ನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿದೆ ಎಂದು ಡಾ.ರಮೇಶ್ ಮಿತ್ತಲ್ ತಿಳಿಸಿದರು.

ರೈತರ ಆದಾಯ ದ್ವಿಗುಣದ ಗುರಿ: ಸಾಧ್ಯವಿದ್ದಷ್ಟು ಬೇಗ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಜೈಪುರದ ಎನ್‌ಐಎಎಂ ಹೊಂದಿದೆ. ಡಿಜಿಟಲ್ ಆಯುಧವನ್ನು ಬಳಸಿ ಈ ಗುರಿಯನ್ನು ಸುಲಭದಲ್ಲಿ ಸಾಧಿಸಬಹುದು. ಇದಕ್ಕಾಗಿ ಎನ್‌ಐಎಎಂ ಸಂಶೋಧನೆ, ತರಬೇತಿಯೊಂದಿಗೆ ಸಲಹೆಗಳನ್ನು ನೀಡುತ್ತಿದೆ. ರೈತರು ಹಾಗೂ ಕೃಷಿಯೋದ್ಯಮಿಗಳಿಬ್ಬರಿಗೂ ನಮ್ಮ ಸಂಸ್ಥೆ ತರಬೇತಿಗಳನ್ನು ನೀಡುತ್ತಿದೆ ಎಂದರು.

ಇದಕ್ಕಾಗಿ ಕೃಷಿ ಹಾಗೂ ಮಣ್ಣಿನ ಕುರಿತಂತೆ ನಮ್ಮ ರೈತರಿಗಿರುವ ಮೂಲಭೂತ ತಿಳುವಳಿಕೆ, ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ಇದರೊಂದಿಗೆ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೂ ಸರಿಯಾದ ಸಂಪರ್ಕ ಹಾಗೂ ಸಂವಹನವನ್ನು ಇರಿಸಿಕೊಳ್ಳಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಎನ್‌ಎಂಎಎಂಐಟಿಯ ಪ್ರಾಂಶುಪಾಲರಾದ ಡಾ.ನಿರಂಜನ್ ಎನ್. ಚಿಪ್ಳೂಣಕರ್ ಮಾತನಾಡಿ, ಕೃಷಿಯೋದ್ಯಮಿಗಳು ಮಾರುಕಟ್ಟೆಯ ಶಿಸ್ತನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಿಂಡಿಕೇಟ್ ಬ್ಯಾಂಕಿನ ಉಡುಪಿ ವಲಯ ಕಚೇರಿಯ ಡಿಜಿಎಂ ಬಿ.ಆರ್. ಹಿರೇಮಠ ಅವರು ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಡಾ.ಕೆ.ಶಂಕರನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಪೋರೇಟ್ ಪ್ರೋಗ್ರಾಂನ ಡೀನ್ ಡಾ.ಎ.ಪಿ.ಆಚಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ದೇಶದಾದ್ಯಂತದಿಂದ ಆಗಮಿಸಿದ 40ಕ್ಕೂಅಧಿಕ ಕೃಷಿಯೋದ್ಯಮಿಗಳು ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಭಾಗವಹಿಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News