ಸಹೋದರನ ಕೊಲೆ : ಇನ್ನೋರ್ವ ಆರೋಪಿಯ ಬಂಧನ

Update: 2018-09-25 15:37 GMT

ಮೂಡುಬಿದಿರೆ,ಸೆ.25: ಇತ್ತೀಚೆಗೆ ಹಣದಾಸೆಗೆ ತನ್ನ ಒಡಹುಟ್ಟಿದ ಅಣ್ಣನನ್ನು ಸ್ನೇಹಿತರೊಂದಿಗೆ ಸೇರಿ ಹೊಸಬೆಟ್ಟುನಲ್ಲಿ ಅಮಾನುಷವಾಗಿ ಕೊಲೆ ಮಾಡಿ ಬಳಿಕ ಶವವನ್ನು ನದಿಗೆಸೆದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಸಿದ್ಧಕಟ್ಟೆಯ ಪ್ರಸಾದ್ ಯಾನೆ ಪಚ್ಚು(35)ಎಂಬಾತನನ್ನು ಪೊಲೀಸರು ಬಂಧಿಸಿ ಮಂಗಳವಾರ ಇಲ್ಲಿನ ಕೋರ್ಟ್‍ಗೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ಬಂಧಿತರ ಸಂಖ್ಯೆ ಐದಕ್ಕೇರಿದೆ. 

ಇಲ್ಲಿನ ಬಟ್ಟೆ ಅಂಗಡಿಯ ಉದ್ಯೋಗಿಯಾಗಿದ್ದ ಹೊಸಬೆಟ್ಟು ಕಡಂಬರಗುತ್ತು ಸುದರ್ಶನ್ ಜೈನ್(28)ಎಂಬವರನ್ನು  ಆಗಸ್ಟ್ 11ರಂದು ರಾತ್ರಿ ಆತನ ತಮ್ಮ ಸುಧೀರ್ ಜೈನ್ ಜತೆ ಬೈಕ್ ನಲ್ಲಿ ಮನೆಗೆಂದು ಕರೆದುಕೊಂಡು ಬಂದಿದ್ದ. ಮನೆ ಹತ್ತಿರ ತಲುಪುವಾಗ ಬೈಕ್ ಕೆಟ್ಟು ಹೋಗಿದೆ ಎಂದು ಸುಳ್ಳು ಹೇಳಿ ಅಣ್ಣನನ್ನು ಬೈಕ್‍ನಿಂದ ಇಳಿಸಿ ಹತ್ತಿರದಲ್ಲಿ ನಿಂತಿದ್ದ ಕಾರಿನೊಳಗೆ ಕರೆದುಕೊಂಡು ಹೋಗಿದ್ದ. ಅದರಲ್ಲಿದ್ದ ಸುಧೀರ್ ನ ಸ್ನೇಹಿತರು ಕಾರನ್ನು ಬೇರೆಡೆಗೆ ಕೊಂಡೊಯ್ದು ಸುದರ್ಶನ್ ಗೆ ಮಾರಕಾಯುಧದಿಂದ ಇರಿದು ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಬಳಿಕ ಮೃತದೇಹವನ್ನು ಪುಚ್ಚೆಮೊಗರಿನ ಪಲ್ಗುಣಿಗೆ ನದಿಗೆ ಎಸೆದಿದ್ದರು. ಆಗಸ್ಟ್ 17ರಂದು ಮೃತದೇಹ ಮರವೂರು ಡ್ಯಾಂನಲ್ಲಿ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೃತನ ತಮ್ಮ ಸುಧೀರ್ ಜೈನ್(24) ಆತನ ಸ್ನೇಹಿತರಾದ ಹೊಕ್ಕಾಡಿಗೋಳಿಯ ಸಂದೀಪ್ ಶೆಟ್ಟಿ(29), ವೇಣೂರು ಆರಂಬೋಡಿಯ ಬಾಲರಾಜ್(23), ವಾಹನ ಚಾಲಕ ಆರಂಬೋಡಿಯ ಪ್ರಭಾ ಯಾನೆ ಪ್ರಭಾಕರನನ್ನು ಈ ಹಿಂದೆ ಬಂಧಿಸಿದ್ದರು. ಮೂಡುಬಿದಿರೆ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ. 
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News