ಮಂಗಳೂರು: ಮಾದಕ ವಸ್ತು ಮಾರಾಟ; ಮೂವರ ಬಂಧನ

Update: 2018-09-25 15:50 GMT
ಮುಹಮ್ಮದ್ ಶಾಕೀರ್, ಫಕ್ರುದ್ದೀನ್ ಯಾನೆ ಇರ್ಫಾನ್, ನದೀಮ್

ಮಂಗಳೂರು, ಸೆ.25: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಸನ್ ರಾಯಲ್ ರೆಸಿಡೆನ್ಸಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಗಾಂಜಾ ಹಾಗೂ ಎಂಡಿಎಂಎ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಹಾಗೂ ಉರ್ವ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗುರುಪುರ ಕೈಕಂಬ ನಿವಾಸಿ ಮುಹಮ್ಮದ್ ಶಾಕೀರ್ (23), ಪಂಜಿಮೊಗರು ನಿವಾಸಿ ನದೀಮ್ (26) ಹಾಗೂ ಕಾವೂರು ಶಾಂತಿ ನಗರ ನಿವಾಸಿ ಫಕ್ರುದ್ದೀನ್ ಯಾನೆ ಇರ್ಫಾನ್ (26) ಎಂದು ಗುರುತಿಸಲಾಗಿದೆ.

ಗಾಂಜಾ, ಎಂಡಿಎಂಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಬಂಧಿತರಿಂದ ಏಳು ಗ್ರಾಂ ಗಾಂಜಾ, 20 ಗ್ರಾಂ ತೂಕದ ಎಂಡಿಎಂಎ ಎಂಬ ಮಾದಕ ವಸ್ತು, ಮೂರು ಮೊಬೈಲ್ ಫೋನ್‌ಗಳು ಮತ್ತು ನಗದು 74,025 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,20,275 ರೂ. ಎಂದು ಅಂದಾಜಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಹಾಗೂ ಉರ್ವ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರಾಧ ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತೆ ಉಮಾ ಪ್ರಶಾಂತ್ ಹಾಗೂ ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ ಸಿಸಿಬಿ ಮತ್ತು ಉರ್ವ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಉರ್ವ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News