ಉಡುಪಿ: ಬ್ಯಾಂಕ್‌ಗಳ ಠೇವಣಿ ಮೊತ್ತ 22667ಕೋಟಿ ರೂ.ಗೆ ಏರಿಕೆ

Update: 2018-09-25 16:00 GMT

ಉಡುಪಿ, ಸೆ.25: ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಠೇವಣಿ ಮೊತ್ತವು 2018ರ ಜೂನ್ ಅಂತ್ಯದ ವೇಳೆಗೆ 22667ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.8.03 ಪ್ರಗತಿ ಸಾಧಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಉಪಮಹಾಪ್ರಬಂಧಕ ನಟರಾಜ ಎಸ್.ಇ. ತಿಳಿಸಿದ್ದಾರೆ.

ಉಡುಪಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಲೀಡ್ ಬ್ಯಾಂಕ್‌ನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಜಿಲ್ಲೆಯ ಬ್ಯಾಂಕುಗಳು ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಸಾಧಿಸಿದ ಪ್ರಗತಿಯ ವರದಿಯನ್ನುಸಭೆಯ ಮುಂದಿರಿಸಿ ಮಾತನಾಡಿದರು.

ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 11708 ಕೋಟಿ ಸಾಲ ನೀಡಲಾಗಿದ್ದು, ಶೇ.11.33 ಪ್ರಗತಿ ಸಾಧಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿಯ ಅುಪಾತ ಶೇ.55.65ರಷ್ಟಿದೆ ಎಂದರು.

2018-19ರಲ್ಲಿ ಜಿಲ್ಲೆಯ ಬ್ಯಾಂಕ್‌ಗಳು 8705.63ಕೋಟಿ ರೂ. ಸಾಲದ ಗುರಿಯನ್ನು ಹೊಂದಿದ್ದು, ಇದಲ್ಲಿ ಜೂನ್ ತಿಂಗಳ ಕೊನೆಯವರೆಗೆ 1851 ಕೋಟಿ ರೂ. ಸಾಲವನ್ನು ನೀಡುವ ಮೂಲಕ ಶೇ.21.26 ಸಾಧನೆ ಮಾಡಲಾಗಿದೆ ಎಂದರು.

ಈ ಸಾಲದಲ್ಲಿ ಕೃಷಿ ಕ್ಷೇತ್ರಗಳಿಗೆ 666ಕೋಟಿ ರೂ., ಮೈಕ್ರೋ, ಕಿರು, ಮಧ್ಯಮ ಉದ್ಯಮಗಳಿಗೆ 480ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 10ಕೋಟಿ ರೂ. ಹಾಗೂ ಹೌಸಿಂಗ್‌ಗೆ 111ಕೋಟಿ ರೂ., ಇತರ ಆದ್ಯತಾ ಕ್ಷೇತ್ರಗಳಿಗೆ 249 ಕೋಟಿ ರೂ.ವನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ಮುಖ್ಯಪ್ರಬಂಧಕ ರುದ್ರೇಶ್ ಡಿ.ಸಿ. ಮಾತನಾಡಿ, ಜಿಲ್ಲೆ ಯಲ್ಲಿ ಈ ವರ್ಷದ ತ್ರೈಮಾಸಿಕ ಅವಧಿಯಲ್ಲಿ 12,528 ಖಾತೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 101 ಕೋಟಿ ರೂ. ವಿತರಿಸಲಾಗಿದೆ. ಸ್ಟಾಂಡ್ ಅಪ್ ಯೋಜನೆಯ ಫಲಾನುಭವಿಗಳ ಆಯ್ಕೆ ಸಂದರ್ಭ ಪ್ರತೀ ಶಾಖೆಯಲ್ಲಿ ಒಬ್ಬರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳೆ ಕಡ್ಡಾ ುವಾಗಿ ಇರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಗ್ರಾಪಂಗಳಲ್ಲಿನ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆಧಾರ್ ಕಾರ್ಡ್‌ನಿಂದ ತೊಂದರೆ ಎದುರಾಗಿದೆ. ಆದುದರಿಂದ ಸರಕಾರ ಗ್ರಾಪಂಗಳಿಗೆ ನೀಡಿರುವ ಅಧಿಕೃತ ಮೊಬೈಲ್ ಸಂಖ್ಯೆ ಆಧಾರದಲ್ಲಿ ವ್ಯವಹಾರ ನಡೆಸಲು ಕ್ರಮಕೈಗೊಳ್ಳಬೇಕಾಗಿದೆ ಎಂದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಜಿಗಳನ್ನು ಸ್ವೀಕರಿಸಿ ಕೂಡಲೇ ಇತ್ಯರ್ಥ ಪಡಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡಬೇಕು. ಇದರಿಂದ ಬಡ ವರಿಗೆ ಯಾವುದೇ ತೊಂದರೆ ಆಗಬಾರದು ಎಂದು ಅವರು ಬ್ಯಾಂಕ್ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಬೆಂಗಳೂರು ಆರ್‌ಬಿಐಯ ಸಹಾಯಕ ಮಹಾಪ್ರಬಂಧಕ ಪಿ.ಕೆ. ಪಟ್ನಾಯಕ್, ನಬಾರ್ಡ್ ಸಹಾಯಕ ಮಹಾಪ್ರಬಂಧ ಎಸ್.ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News