ಗಂಟಾಲ್‌ಕಟ್ಟೆ ಯುವಕನ ಕೊಲೆಯತ್ನ ಪ್ರಕರಣ : ಚುರುಕುಗೊಂಡ ತನಿಖಾ ಕಾರ್ಯಾಚರಣೆ

Update: 2018-09-25 16:25 GMT

ಮಂಗಳೂರು, ಸೆ.25: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಂಜ ಗ್ರಾಮದ ಗಂಟಾಲ್‌ಕಟ್ಟೆ ನಿವಾಸಿ ಇಮ್ತಿಯಾಝ್(32) ಮೇಲಿನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸರು ತನಿಖಾ ಕಾರ್ಯಾಚರಣೆಯನ್ನು ಚುರುಕುಗೊಳಿದ್ದಾರೆ.

ಸೋಮವಾರ ಬೆಳಗ್ಗೆ ಯುವಕ ಇಮ್ತಿಯಾಝ್ ಗಂಟಲ್‌ಕಟ್ಟೆ ಮಸೀದಿಯ ಕಟ್ಟಡ ಬಳಿ ಎಂದಿನಂತೆ ಸೋಮವಾರ ಬೆಳಗ್ಗಯೂ ಕ್ಯಾಂಟೀನ್ ನಡೆಸುತ್ತಿದ್ದ. ಈ ವೇಳೆ ನಾಲ್ಕೈದು ಮಂದಿಯ ತಂಡವೊಂದು ಆಗಮಿಸಿ ಕೃತ್ಯ ಎಸಗಿ ಪರಾರಿಯಾಗಿತ್ತು. ಈ ವೇಳೆ ಇಮ್ತಿಯಾಝ್ ಅವರ ತಲೆ, ಕೈ ಹಾಗೂ ಬೆನ್ನಿಗೆ ಗಂಭೀರವಾದ ಗಾಯಗಳಾಗಿದ್ದವು. ಈ ವೇಳೆ ಇಮ್ತಿಯಾಝ್ ಮೇಳೆ ನಡೆದ ದಾಳಿಯನ್ನು ತಡೆಯಲು ಯತ್ನಿಸಿದ್ದ ಹೊಟೇಲ್ ಸಿಬ್ಬಂದಿಯ ಮೇಲೂ ತಂಡ ದಾಳಿ ನಡೆಸಿತ್ತು. ಗಾಯಾಳುಗಳು ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳ ಶೀಘ್ರ ಪತ್ತೆ: ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್
ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್‌ಗಳು ವಶಕ್ಕೆ ಪಡೆದು ವಾಹನಗಳ ಚಲನವಲನ ಹಾಗೂ ಆರೋಪಿಗಳ ಸುಳಿವಿನ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News