ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು: ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೆ ವರ್ಷಾಚರಣೆ

Update: 2018-09-25 18:30 GMT

ಬಂಟ್ವಾಳ, ಸೆ. 25: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನ ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೆ ವರ್ಷಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಚರಿಸಲಾಯಿತು.

ಸಿದ್ಧಕಟ್ಟೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವಜನತೆಗೆ ಸ್ಪೂರ್ತಿಯಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸುವಂತಾಗಲಿ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೆ ವರ್ಷಾಚರಣೆಯು ಪ್ರೇರಣೆಯಾಗಲಿ ಎಂದರು.

ಪುತ್ತೂರು ಅಂಬಿಕಾ ಕಾಲೇಜಿನ ಸಂಸ್ಕೃತ ಉಪನ್ಯಾಸ ಶ್ರೀಕೃಷ್ಣ ಉಪಾಧ್ಯಾಯ ವಿಶೇಷ ಉಪನ್ಯಾಸ ನೀಡಿ, ಸ್ವಾಮಿ ವಿವೇಕಾನಂದರು ಭಾರತದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ತಮ್ಮ ಜೀವನದ ಅನುಭವವನ್ನು ಪಡೆದು ಉದಾತ್ತ ಚಿಂತನೆಗಳನ್ನು ಪ್ರಪಂಚಕ್ಕೆ ನೀಡಿದರು. ಅವರೊಬ್ಬ ಅಪರೂಪದ ದಾರ್ಶನಿಕ ಹಾಗೂ ಸಮಾಜ ಚಿಂತಕ. ಅವರ ಬರಹಗಳು ಹಾಗೂ ಚಿಂತನೆಗಳು ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ದಾರಿದೀಪವಾಗಿವೆ. ಬದುಕು ಒಂದು ಅನುಕರಣೆಯಲ್ಲ ಅದು ಸ್ವಂತಿಕೆ. ಆದ್ದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸ್ವಂತಿಕೆಯನ್ನು ಗಳಿಸಿ ಬದುಕಿನ ಗುರಿಯತ್ತ ಮುನ್ನುಗ್ಗಬೇಕು. ಈ ನಿಟ್ಟಿನಲ್ಲಿ ವಿವೇಕಾನಂದರ ಆದರ್ಶಗಳು ಮತ್ತು ಚಿಂತನೆಗಳು ಬಹು ಉಪಯುಕ್ತ ಎಂದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್, ಸ್ವಾಮಿ ವಿವೇಕಾನಂದರ ಬದುಕು ಹಾಗೂ ಚಿಂತನೆಗಳು ವಿದ್ಯಾರ್ಥಿಗಳಿಗೆ ಪ್ರೇರಣಾ ಶಕ್ತಿ. ವಿದ್ಯಾರ್ಥಿ ಜೀವನದ ಸಾಧನೆಗೆ ಬಹು ಅವಶ್ಯಕವಾದ ಆತ್ಮವಿಶ್ವಾಸ, ಛಲ, ಏಕಾಗ್ರತೆ, ಸತತ ಪ್ರಯತ್ನ ಇತ್ಯಾದಿಗಳು ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಅಡಕವಾಗಿವೆ. ಆದುದರಿಂದ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೆ ವರ್ಷಾಚರಣೆಯು ಪೂರಕವಾಗಲಿ ಎಂದರು. 
ಕಾಲೇಜಿನ ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕರಾದ ವಿನಯ್ ಎಂಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ದೇವಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ ಸ್ವಾತಿ ಮತ್ತು ದಿವ್ಯಶ್ರೀ ಪ್ರಾರ್ಥಿಸಿ, ಮೋಹಿನಿ ಸ್ವಾಗತಿಸಿ, ಪ್ರಣಮ್ ಜೈನ್ ವಂದಿಸಿ, ದಿವ್ಯ ನಿರೂಪಿಸಿದರು. ಕಾಲೇಜಿನ ಎಲ್ಲ ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News