ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಪಾವತಿಯಲ್ಲಿ ವಿಳಂಬ:ಅಂಗನವಾಡಿ ಬಂದ್‍ಗೊಳಿಸಿ ಮುಷ್ಕರ; ಎಚ್ಚರಿಕೆ

Update: 2018-09-25 18:35 GMT

ಬಂಟ್ವಾಳ, ಸೆ. 25: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜುಲೈ ಹಾಗೂ ಆಗಸ್ಟ್ ತಿಂಗಳ ಗೌರವಧನವನ್ನು ಶೀಘ್ರವೇ ಪಾವತಿಸದಿದ್ದಲ್ಲಿ ಅಂಗನವಾಡಿ ಬಂದ್‍ಗೊಳಿಸಿ ಮುಷ್ಕರ ನಡೆಸುವುದಾಗಿ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಎಚ್ಚರಿಸಿದೆ. 

ಜುಲೈ ಹಾಗೂ ಆಗಸ್ಟ್ ತಿಂಗಳ ಗೌರವಧನ ಪಾವತಿಯಾಗದೇ ಇರುವುದರಿಂದ ಅತ್ಯಲ್ಪ ಗೌರವಧನದಲ್ಲಿ ಜೀವನ ಸಾಗಿಸಲು ತುಂಬಾ ಕಷ್ಟವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಗೌರವಧನ ಪಾವತಿಸುವುದಾಗಿ ಇಲಾಖೆಯ ಮೇಲಧಿಕಾರಿಗಳು ಈ ಹಿಂದೆಯೂ ಹಲವು ಬಾರಿ ಹೇಳಿದ್ದರೂ, ಈ ಬಗ್ಗೆ ಪದೇ ಪದೇ ಮನವಿ ಸಲ್ಲಿಸಿದರೂ ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಒಂದು ವೇಳೆ ಬಾಂಕ್ ಖಾತೆಗೆ ಗೌರವ ಧನ ಶೀಘ್ರವಾಗಿ ಜಮಾ ಆಗದಿದ್ದರೆ ಮಾಸಿಕ ವರದಿ ಸಲ್ಲಿಕೆಯನ್ನು ತಡೆ ಹಿಡಿಯಲು ನಿರ್ಧರಿಸುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. 

ಸೆ. 24ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಕುಂದು ಕೊರತೆ ನಿವಾರಣಾ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, ಮುಂದಿನ ಅಕ್ಟೋಬರ್ 5ರೊಳಗೆ ಬಾಕಿಯಿರುವ ಎಲ್ಲ ಗೌರವಧನ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬ್ಯಾಂಕ್ ಖಾತೆಗೆ ಜಮೆಯಾಗದಿದ್ದಲ್ಲಿ ಅಂಗನವಾಡಿಗಳನ್ನು ಬಂದ್‍ಗೊಳಿಸಿ ಮುಷ್ಕರ ಆರಂಭಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News