ಸಾಲ ಮರುಪಾವತಿಯಲ್ಲೂ ಅಲ್ಪಸಂಖ್ಯಾತರು ಮುಂದು!

Update: 2018-09-26 07:08 GMT

ಮಂಗಳೂರು, ಸೆ.25: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅೀನದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2017-18ನೇ ಸಾಲಿನಲ್ಲಿ ಸಾಲ ಪಡೆದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು, ಪಾರ್ಸಿ, ಸಿಖ್ಖರು ಭಾಗಶಃ ಸಾಲ ಮರು ಪಾವತಿಸುವ ಮೂಲಕ ‘ಸಾಲ ಮರುಪಾವತಿ’ಯಲ್ಲೂ ಮುಂದಿರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ.

ಅಲ್ಪಸಂಖ್ಯಾತರು ಆಸಕ್ತಿಯಿಂದ ಸಾಲ ಪಡೆಯುತ್ತಾರೆಯೇ ವಿನಃ ಮರು ಪಾವತಿಸುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಲೇ ಇದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪಡೆದ ಸಾಲವನ್ನು ನಿಗದಿತ ಅವಯೊಳಗೆ ಮರು ಪಾವತಿಸಿ ಗಮನ ಸೆಳೆದಿದ್ದಾರೆ.

2017ರ ಎಪ್ರಿಲ್‌ನಿಂದ 2018ರ ಮಾರ್ಚ್‌ವರೆಗೆ ಶ್ರಮಶಕ್ತಿ (ಜನರಲ್)ಯೋಜನೆಯಡಿ 7,16,880 ಲಕ್ಷ ರೂ., ಶ್ರಮಶಕ್ತಿ (ಕ್ರಿಶ್ಚಿಯನ್)ಯೋಜನೆಯಡಿ 16,61,589 ಲಕ್ಷ ರೂ., ಕಿರುಸಾಲ (ಜನರಲ್) ಯೋಜನೆಯಡಿ 11,11,958 ಲಕ್ಷ ರೂ., ಕಿರುಸಾಲ (ಕ್ರಿಶ್ಚಿಯನ್) ಯೋಜನೆಯಡಿ 1,44,786 ಲಕ್ಷ ರೂ., ಅರಿವು (ಜನರಲ್)ಯೋಜನೆಯಡಿ 55,91,692 ಲಕ್ಷ ರೂ., ಅರಿವು (ಕ್ರಿಶ್ಚಿಯನ್) ಯೋಜನೆಯಡಿ 21,31,936 ಲಕ್ಷ ರೂ., ಸ್ವಾವಲಂಬನಾ ಯೋಜನೆಯಡಿ 16,42,054 ಲಕ್ಷ ರೂ., ನೇರಸಾಲ ಯೋಜನೆಯಡಿ 14,33,155 ಲಕ್ಷ ರೂ. ಸಹಿತ ಒಟ್ಟು 1,44,34,030 ಕೋ.ರೂ.ಸಾಲ ಮರುಪಾವತಿಯಾಗಿದೆ.

2018-19ನೆ ಸಾಲಿನಲ್ಲೂ ಸಾಲ ಮರುಪಾವತಿ ಪ್ರಕ್ರಿಯೆಯೂ ಆಶಾದಾಯಕವಾಗಿದೆ. ಅಂದರೆ, 2018ರ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ಶ್ರಮಶಕ್ತಿ (ಜನರಲ್) ಯೋಜನೆಯಡಿ 2,19,178 ಲಕ್ಷ ರೂ., ಶ್ರಮಶಕ್ತಿ (ಕ್ರಿಶ್ಚಿಯನ್)ಯೋಜನೆಯಡಿ 7,62,168 ಲಕ್ಷ ರೂ., ಕಿರುಸಾಲ (ಜನರಲ್) ಯೋಜನೆಯಡಿ ಮರುಪಾವತಿಯಾಗಿದೆ.

2,36,189 ಲಕ್ಷ ರೂ., ಕಿರುಸಾಲ (ಕ್ರಿಶ್ಚಿಯನ್) ಯೋಜನೆಯಡಿ 58,551 ರೂ., ಅರಿವು (ಜನರಲ್) ಯೋಜನೆಯಡಿ 25,24,462 ಲಕ್ಷ ರೂ, ಅರಿವು (ಕ್ರಿಶ್ಚಿಯನ್)ಯೋಜನೆಯಡಿ 27,46,880 ಲಕ್ಷ ರೂ., ಸ್ವಾವಲಂಬನಾ ಯೋಜನೆಯಡಿ 19,56,212 ಲಕ್ಷ ರೂ., ನೇರ ಸಾಲ ಯೋಜನೆಯಡಿ 11,52,629 ಲಕ್ಷ ರೂ.ಸಹಿತ ಒಟ್ಟು 96,56,269 ಲಕ್ಷ ರೂ. ಮರುಪಾವತಿಯಾಗಿದೆ.

ಅರ್ಜಿಯ ಗುರಿ 3,361  ಸಲ್ಲಿಕೆಯಾದ ಅರ್ಜಿ 44,105

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸ್ವಉದ್ಯೋಗ, ಶೈಕ್ಷಣಿಕ ಸಾಲ, ಕೃಷಿ ಇತ್ಯಾದಿಗಳಿಗೆ ಸಂಬಂಸಿ ದ.ಕ. ಜಿಲ್ಲೆಯಲ್ಲಿ 2018-19ನೇ ಸಾಲಿಗೆ ನಿಗದಿಪಡಿಸಿದ ಗುರಿಗಿಂತ ಅಕ ಅರ್ಜಿಗಳು ಸಲ್ಲಿಕೆಯಾಗಿವೆ. ಅಂದರೆ ಜಿಲ್ಲೆಯಲ್ಲಿ 2018-19ನೇ ಸಾಲಿಗೆ 10 ಯೋಜನೆಗಳಿಗೆ ಒಟ್ಟು 3,361 ಭೌತಿಕ ಗುರಿ ನಿಗದಿಪಡಿಸಲಾಗಿತ್ತು. ಆದರೆ ಸೆ.20ರವರೆಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 44,105. ಅಂದರೆ ಬರೋಬ್ಬರಿ ಸುಮಾರು 13 ಪಟ್ಟಿಗೂ ಅಕ ಅರ್ಜಿಗಳು ಸಲ್ಲಿಕೆಯಾಗಿವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟದ್ದೇ ಈ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ರಾಜ್ಯ ಸರಕಾರ ದ.ಕ.ಜಿಲ್ಲೆಗೆ ನೀಡಿದ 3,361 ಭೌತಿಕ ಗುರಿಗೆ 1,672.13 ಲಕ್ಷ ರೂ. ನಿಗದಿಪಡಿಸಿತ್ತು. ಆದರೆ ಸಲ್ಲಿಕೆಯಾದ ಅರ್ಜಿಗಳ ಅನ್ವಯ ಈ ಹಣ ಯಾವುದಕ್ಕೂ ಸಾಕಾಗದು. ಅಂದರೆ ಕನಿಷ್ಠ 110 ಕೋ.ರೂ. ಹಣ ಬೇಕಾದೀತು.

ಆಯ್ಕೆಯೇ ಸಮಸ್ಯೆ?

ಪ್ರತಿಯೊಂದು ಯೋಜನೆಯೂ ವಿಧಾನಸಭಾವಾರು ಹಂಚಿಕೆಯಾಗಲಿದೆ. ಶ್ರಮಶಕ್ತಿ, ಕಿರುಸಾಲ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆಯ ಅರ್ಜಿಯನ್ನು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಲಿದೆ. ಅರಿವು ಯೋಜನೆಯ ಅರ್ಜಿಯನ್ನು ಜಿಪಂನ ಸಿಇಒ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಲಿದೆ. ಉಳಿದಂತೆ ಇತರ ಯೋಜನೆಗಳ ಅರ್ಜಿಯನ್ನು ಜಿಲ್ಲಾಕಾರಿಯ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಲಿದೆ.

ಈ ಹಿಂದೆ ನಿಗಮದ ಯೋಜನೆಗಳ ಬಗ್ಗೆ ಜಿಲ್ಲೆಯ ಜನರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಈ ಬಗ್ಗೆ ಮಾಹಿತಿ ಸಿಗುತ್ತಿದೆ. ಅದರಂತೆ ಈ ಬಾರಿ 3,361 ಭೌತಿಕ ಗುರಿ ಇದ್ದು, ಅದಕ್ಕೆ ಬಂದ ಅರ್ಜಿಗಳ ಸಂಖ್ಯೆ 44,105. ಅಲ್ಪಸಂಖ್ಯಾತರು ಸಾಲ ಮರುಪಾವತಿಸುವುದಿಲ್ಲ ಎಂಬ ಅಪವಾದ ಇದೆ. ಆದರೆ, ನಿಗದಿತ ಸಮಯಕ್ಕೆ ಮರುಪಾವತಿಸಿ ನಿಗಮದ ಗೌರವ ಹೆಚ್ಚಿಸಿದ್ದಾರೆ. ಕಳೆದ ಬಾರಿ ನಾವು ವಿವಿಧ ಯೋಜನೆಯಡಿ ಸುಮಾರು 43 ಕೋ.ರೂ. ಸಾಲ ನೀಡಿದ್ದೆವು. ಅದರಲ್ಲಿ ಅರ್ಧದಷ್ಟು ಸಬ್ಸಿಡಿ ಇದೆ. ಉಳಿದ ಮೊತ್ತವನ್ನು ಮೂರು ವರ್ಷಗಳೊಳಗೆ (ಶಿಕ್ಷಣ ಸಾಲ ಹೊರತುಪಡಿಸಿ) ಮರುಪಾವತಿಸಬೇಕು. ಕಳೆದ ವರ್ಷ ಸುಮಾರು 1.50 ಕೋ.ರೂ. ಸಾಲ ಮರುಪಾವತಿಯಾಗಿದೆ. ಈ ಬಾರಿ ಅಂದರೆ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ 1 ಕೋ.ರೂ. ಸಾಲ ಮರು ಪಾವತಿಯಾಗಿದೆ. 2018-19ನೇ ಸಾಲಿನಲ್ಲಿ 3 ಕೋ.ರೂ.ನ ಸಾಲ ಮರುಪಾವತಿಯ ಗುರಿ ಹಾಕಲಾಗಿದೆ. ಅದನ್ನು ಸಕಾಲಕ್ಕೆ ಮರು ಪಾವತಿಸುವ ವಿಶ್ವಾಸವಿದೆ. ಜಿಲ್ಲೆಯ ಅಲ್ಪಸಂಖ್ಯಾತರು ಸಾಲ ಪಡೆಯುವುದರಲ್ಲಿ ಮಾತ್ರವಲ್ಲ ಮರು ಪಾವತಿಯಲ್ಲೂ ಮುಂದಿರುವ ಮೂಲಕ ರಾಜ್ಯಮಟ್ಟದಲ್ಲೇ ಗಮನ ಸೆಳೆದಿದ್ದಾರೆ.

ಶ್ರೀಧರ ಭಂಡಾರಿ

ಜಿಲ್ಲಾ ವ್ಯವಸ್ಥಾಪಕರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News