ಜೆಪ್ಪು ಮಹಾಕಾಳಿಪಡ್ಪು: ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ

Update: 2018-09-26 12:46 GMT

ಮಂಗಳೂರು, ಸೆ. 26: ಜೆಪ್ಪು ಮಹಾಕಾಳಿಪಡ್ಪುವಿ ಸಮೀಪ ಎರಡು ರೈಲ್ವೆ ಕೆಳಸೇತುವೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಬುಧವಾರ ಮಹಾ ಕಾಳಿಪಡ್ಪು ಬಳಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಕಳೆದ ಹಲವು ವರ್ಷದಿಂದ ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸುತ್ತಾ ಬಂದರೂ ಕೂಡಾ ಪಾಲಿಕೆಯು ತನ್ನ ಪಾಲಿನ ಹಣ ಬಿಡುಗಡೆ ಮಾಡದೆ ನಿರ್ಲಕ್ಷ ತಾಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 40 ವರ್ಷಗಳ ಹಿಂದೆಯೇ ಇಲ್ಲಿ ರೈಲ್ವೆ ಗೇಟ್ ಹಾಕಲಾಗಿದೆ. ಇದು ಮಂಗಳೂರನ್ನು ಸಂಪರ್ಕಿಸುವ ಹೆಬ್ಬಾಗಿಲು ಎಂದರೂ ತಪ್ಪಾಗಲಾರದು. ನಗರ ಮತ್ತು ಹೆದ್ದಾರಿ ನಡುವೆ ಇದು ಸಂಚಾರ ದಟ್ಟಣೆಯನ್ನೂ ಕೂಡಾ ಕಡಿಮೆ ಮಾಡುತ್ತದೆ. ಆಸುಪಾಸು 10 ಸಾವಿರಕ್ಕೂ ಅಧಿಕ ಮಂದಿ ನೆಲೆಸಿದ್ದಾರೆ.

ಪ್ರಾರ್ಥನಾ ಕೇಂದ್ರಗಳು, ಶಾಲಾ, ಕಾಲೇಜುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಲಘು ಮತ್ತು ಘನ ವಾಹನ ಸಂಚರಿಸಲು ಕನಿಷ್ಠ ಅರ್ಧ ಕಿ.ಮೀ. ಅಂತರದಲ್ಲಿ ಎರಡು ಕೆಳಸೇತುವೆಗಳನ್ನು ನಿರ್ಮಿಸಲೇಬೇಕು. ಮನಪಾ ಸ್ಮಾರ್ಟ್ ಸಿಟಿ ಎನ್ನುತ್ತದೆಯೇ ವಿನಃ ಇಂತಹ ಜನಪರ ಕೆಲಸ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿಲ್ಲ. ತಕ್ಷಣ ಮನಪಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಮಹಾಕಾಳಿಪಡ್ಪು ನಿರ್ಮಲನಗರದ ನಾಗರಿಕ ಹಿತರಕ್ಷಣಾ ಸಮಿತಿಯ ವೇದಿಕೆಯ ಪದಾಧಿಕಾರಿಗಳಾದ ಮುಹಮ್ಮದ್ ಸೂಫಿ, ಶರೀಫ್ ಟಿ.ಎ., ಇಮ್ತಿಯಾಝ್ ಕೆ.ಕೆ., ರಮೊಲಾ ರಾವ್, ಎಲಿಜೆಬಿತ್, ದೇವದಾಸ್, ದಕ್ಷಿಣ ವಲಯ ರೈಲ್ವೆ ಗ್ರಾಹಕರ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಅಹ್ಮದ್ ಬಾವಾ ಬಜಾಲ್, ತುರವೇ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪುಮತ್ತಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News