ವಿಶ್ವಸಂಸ್ಥೆ ಸಭೆಯಲ್ಲಿ ನಗೆಪಾಟಲಿಗೀಡಾದ ಟ್ರಂಪ್!

Update: 2018-09-26 08:50 GMT

ನ್ಯೂಯಾರ್ಕ್, ಸೆ.26: ಹಲವಾರು ಇತರ ರಾಷ್ಟ್ರಗಳು ವಿಶ್ವಸಂಸ್ಥೆಯ ಅನಗತ್ಯ ಲಾಭ ಪಡೆದುಕೊಂಡಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಳ ಸಮಯದಿಂದ ಹೇಳುತ್ತಿದ್ದಾರೆ. 2014ರಲ್ಲಿ ಅವರು ಒಮ್ಮೆ ಟ್ವಿಟ್ಟರ್ ನಲ್ಲಿ ವಿಶ್ವ ಸಂಸ್ಥೆ  “ಇಡೀ ವಿಶ್ವದೆದುರು ನಗೆಪಾಟಲಿಗೀಡಾಗಿದೆ'' ಎಂದೂ ಹೇಳಿದ್ದರು. ಆದರೆ ಮಂಗಳವಾರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಗೆಪಾಟಲಿಗೀಡಾಗುವ ಸರದಿ ಟ್ರಂಪ್ ಅವರದ್ದೇ ಆಗಿತ್ತು.

ಇತರ ದೇಶಗಳೆದುರು ಅಮೆರಿಕಾದ ಸಾರ್ವಭೌಮತ್ವವನ್ನು ತೋರ್ಪಡಿಸಿಕೊಳ್ಳುವ ಉದ್ದೇಶದ ಅವರು ತಮ್ಮ ಭಾಷಣದ ಆರಂಭದಲ್ಲಿಯೇ, ಅಂದರೆ ಮೊದಲ ನಿಮಿಷದಲ್ಲಿಯೇ ಎಡವಿದ ಪರಿಣಾಮ ಸಭಾಂಗಣದಲ್ಲಿ ನಗುವಿನ ಅಲೆಯೆದ್ದಿತ್ತು.

ಅಮೆರಿಕಾದ ಇತಿಹಾಸದಲ್ಲಿಯೇ ಯಾವುದೇ ಸರಕಾರಕ್ಕೆ ಮಾಡಲಾಗದಷ್ಟು ಸಾಧನೆಯನ್ನು ತಮ್ಮ ಆಡಳಿತದಡಿಯಲ್ಲಿ ಎರಡು ವರ್ಷಕ್ಕಿಂತ ಸ್ವಲ್ಪ ಹೆಚ್ಚಿನ ಸಮಯದಲ್ಲಿ ಸಾಧಿಸಲಾಗಿದೆ ಎಂದು ಟ್ರಂಪ್ ಹೇಳಿದ್ದೇ ತಡ, ಸಭಾಂಗಣದಲ್ಲಿ ನಗು ತುಂಬಿತ್ತು.

ಟ್ರಂಪ್ ಅರೆ ಕ್ಷಣ ಕಕ್ಕಾಬಿಕ್ಕಿಯಾಗಿದ್ದರು, ``ನಾನಿದನ್ನು ನಿರೀಕ್ಷಿಸಿರಲಿಲ್ಲ, ಆದರೆ ಪರವಾಗಿಲ್ಲ,'' ಎಂದು ಬಿಟ್ಟರು. ಆಗ ಮತ್ತೆ ಎಲ್ಲರೂ ನಕ್ಕಿದ್ದರು, ಪ್ರಾಯಶಃ ಈ ಬಾರಿ ಟ್ರಂಪ್ ಬಗ್ಗೆ ಕನಿಕರ ಪಟ್ಟರೇನೋ ತಿಳಿದಿಲ್ಲ.

ಟ್ರಂಪ್ ತಮ್ಮ ಭಾಷಣವನ್ನು ಸುಮಾರು 24 ನಿಮಿಷ ಮುಂದುವರಿಸಿದರೂ ಅಂತಾರಾಷ್ಟ್ರೀಯ ಸಮುದಾಯ ಅವರ ಸರಕಾರದ ವಿವಿಧ ನೀತಿಗಳ ವಿರುದ್ಧ ಅದೆಷ್ಟು ಅಸಹನೆ ಹೊಂದಿದೆ ಎಂಬುದನ್ನು ಈ ಘಟನೆ ತೋರ್ಪಡಿಸಿದೆ. ಅಮೆರಿಕಾದ ಸಾಂಪ್ರದಾಯಿಕ ಮಿತ್ರ ದೇಶಗಳನ್ನೂ ವ್ಯಾಪಾರ, ರಕ್ಷಣಾ ಮೈತ್ರಿ ಹಾಗೂ ಸಾಮಾನ್ಯ ರಾಜತಾಂತ್ರಿಕ ಮೈತ್ರಿ ವಿಚಾರದಲ್ಲಿ ಚುಚ್ಚಿ ಆನಂದಿಸುವ ಅಧ್ಯಕ್ಷರ ವರ್ತನೆಗೆ ಅಂತಾರಾಷ್ಟ್ರೀಯ ಸಮುದಾಯ ಸರಿಯಾಗಿಯೇ ಸ್ಪಂದಿಸಿದೆ.

ಈ ನಿರ್ದಿಷ್ಟ ಘಟನೆ ಟ್ರಂಪ್ ಅವರಿಗೆ  ಮುಜುಗರ ಸೃಷ್ಟಿಸಿದ್ದು ಮಾತ್ರವಲ್ಲ ಅವರ ಹೇಳಿಕೆಯನ್ನೂ ಠುಸ್ಸಾಗಿಸಿದೆ. ಅವರು ಅಧಿಕಾರ ವಹಿಸಿದಂದಿನಿಂದ ಇಲ್ಲಿಯ ತನಕ 5,000ಕ್ಕೂ ಅಧಿಕ ಸುಳ್ಳು ಹಾಗೂ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆನ್ನಲಾಗಿದೆ.

ಆದರೆ ಸಭೆಯ ನಂತರ ಟ್ರಂಪ್ ಮಾತ್ರ ಏನೂ ಆಗಿಲ್ಲವೆಂಬಂತೆ ವರ್ತಿಸಿದ್ದು, ಸುದ್ದಿಗಾರರ ಜತೆ ಮಾತನಾಡುತ್ತಾ  ಸ್ವಲ್ಪ ನಗು ತುಂಬಲಿ ಎಂಬ ಉದ್ದೇಶವೇ ತಮ್ಮ ಭಾಷಣಕ್ಕಿತ್ತು ಎಂದಿದ್ದಾರೆ. ಆದರೆ ಅವರ ಮಾತನ್ನು ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News