ಅಧಿಕಾರಿಗಳಿಗಾಗಿ ನಿರ್ಮಾಣವಾದ ವಸತಿಗೃಹ 'ಮಾದರಿ ವಸತಿ ಸಮುಚ್ಛಯ': ಸಚಿವ ಖಾದರ್

Update: 2018-09-26 13:05 GMT

ಮಂಗಳೂರು, ಸೆ.26: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ‘ಎ’ ಶ್ರೇಣಿಯ ಆರು ಅಧಿಕಾರಿಗಳಿಗೆ ನಿರ್ಮಿಸಲಾಗಿರುವ ವಸತಿಗೃಹಗಳನ್ನು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು,ರಾಜ್ಯದಲ್ಲಿ ಸರಕಾರಿ ಅಕಾರಿಗಳಿಗೆ ನಿರ್ಮಿಸಿಕೊಟ್ಟಿರುವ ಕಟ್ಟಡಗಳ ಪೈಕಿ ಇಲ್ಲಿನ ಕಟ್ಟಡ ಅತ್ಯುತ್ತಮವಾಗಿದ್ದು, ಮಾದರಿ ವಸತಿ ಸಮುಚ್ಛಯವಾಗಿದೆ. ಕಟ್ಟಡವೂ ಅಗತ್ಯ ಎಲ್ಲಾ ಮೂಲ ಸೌಕರ್ಯವನ್ನು ಒಳಗೊಂಡಿದೆ ಎಂದರು.

ಉರ್ವ ಸ್ಟೋರ್ ಬಳಿ ಸರ್ವೆ ನಂಬ್ರ 1262 ಎ1ಎನಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಈ ನೂತನ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆರು ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಬರೋಬ್ಬರಿ ರೂ.4.83 ಕೋಟಿ ವೆಚ್ಚ ಮಾಡಲಾಗಿದೆ. ಎರಡು ಅಂತಸ್ತುಗಳ ಕಟ್ಟಡವು ಒಟ್ಟು 6,201.25 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಮೂರನೇ ಮಹಡಿಗೆ ಗ್ಯಾಲ್ವಲ್ಯೂಮ್ ಶೀಟ್ ಅಳವಡಿಸಿ ನೆಲಕ್ಕೆ ಗ್ರಾನೈಟ್ ಹಾಸಿ ಸಮಾರಂಭಗಳಿಗೆ ಅನುಕೂಲ ಆಗುವ ರೀತಿಯಲ್ಲಿ ರೂಪಿಸಲಾಗಿದೆ.

ನೆಲ ಅಂತಸ್ತು ಮತ್ತು ಎರಡು ಮಹಡಿಗಳಲ್ಲಿ ಅಧಿಕಾರಿಗಳಿಗೆ ಪದ ನಿಮಿತ್ತ ತಲಾ ಎರಡೆರಡು ವಸತಿ ಗೃಹಗಳಿವೆ. ತಳ ಅಂತಸ್ತಿನಲ್ಲಿ ಉಪ ಕಾರ್ಯದರ್ಶಿ ಮತ್ತು ಮುಖ್ಯ ಯೋಜನಾಧಿಕಾರಿಯವರ ನಿವಾಸಗಳಿವೆ.

ಉದ್ಘಾಟನೆ ಸಂದರ್ಭ ಜಿಲ್ಲಾಕಾರಿ ಸಸಿಕಾಂತ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ.ಆರ್.ಸೆಲ್ವಮಣಿ, ಜಿ.ಪಂ.ಸದಸ್ಯ ಜನಾರ್ದನ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News