ಬಂಟ್ವಾಳ: ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ; ಓರ್ವ ಸೆರೆ

Update: 2018-09-26 14:00 GMT

ಬಂಟ್ವಾಳ, ಸೆ. 26: ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮ ಮಾರಾಟ ಆರೋಪದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಬಂಧಿತನನ್ನು ಬಿ.ಸಿ.ರೋಡಿನ ಪರ್ಲಿಯಾ ನಿವಾಸಿ ನಿಯಾಝ್ ಹಸನ್ ಎಂದು ಗುರುತಿಸಲಾಗಿದೆ. ಈತನಿಂದ ಅಕ್ಕಿ ಸಹಿತ ಸೊತ್ತುಗಳನ್ನು ವಶಪಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ತುಂಬೆ ಸಮೀಪದ ರಾಮಾಲಕಟ್ಟೆ ಎಂಬಲ್ಲಿ ಮಂಗಳವಾರ ರಾತ್ರಿ ಗಸ್ತಿನಲ್ಲಿದ್ದು, ವಾಹನ ತಪಾಸಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಕುಮಾರ್ ಮತ್ತವರ ಸಿಬ್ಬಂದಿ ನಿರತರಾಗಿದ್ದರು. ಈ ಸಂದರ್ಭ ತುಂಬೆಯಿಂದ ಬರುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 50 ಕೆ.ಜಿ.ಯ 40 ಚೀಲದಲ್ಲಿ 20 ಕಿಂಟ್ವಾಲ್ ಪಡಿತರ ಅಕ್ಕಿ ಪತ್ತೆಯಾಗಿವೆ. ತಕ್ಷಣ ಚಾಲಕನನ್ನು ವಿಚಾರಿಸಿದಾಗ ಅನ್ನಭಾಗ್ಯದ ಈ ಅಕ್ಕಿಯನ್ನು ಬಿ.ಸಿ.ರೋಡು ಕಡೆಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಹಾಗೆಯೇ ಪಿಕಪ್ ವಾಹನದಲ್ಲಿ ಗೋಣಿ ಚೀಲವನ್ನು ಹೊಲಿಯುವ 2 ಸಾವಿರ ರೂ. ಮೌಲ್ಯದ ಯಂತ್ರ ಹಾಗೂ 50 ಖಾಲಿ ಗೋಣಿ ಚೀಲಗಳು ಪತ್ತೆಯಾಗಿವೆ. ತಕ್ಷಣ ಪಿಕಪ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಅಹಾರ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಸುರೇಶ್, ಜಯರಾಮ್, ಜನಾರ್ದನ, ಶಿವಕುಮಾರ್ ನಾಯಕ್, ಕಿರಣ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News