ಕಾಪು: ಜೇಸಿಐ ವತಿಯಿಂದ 7.52 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

Update: 2018-09-26 14:11 GMT

ಕಾಪು, ಸೆ. 26: ಜೇಸಿಐ ಭಾರತದ ಪ್ರತಿಷ್ಠಿತ ವಲಯವಾಗಿರುವ ವಲಯ 15ಕ್ಕೆ ಜೇಸಿಐ ಇಂಡಿಯಾ ಫೌಂಡೇಶನ್‍ನ ಮೂಲಕ ಜೇಸಿಐ ಸಂಸ್ಥಾಪಕ ಹೆನ್ರಿ ಗಿಸೆಂಬ್ಲಿಯರ್ ಅವರ ಹೆಸರಿನಲ್ಲಿ ವಿತರಿಸಲಾಗುವ ಹೆಚ್‍ಜಿಎಫ್ ಸ್ಕಾಲರ್‍ಶಿಪ್ ಮೊತ್ತ 7.52 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಜೇಸಿಐನ ವಲಯಾಧ್ಯಕ್ಷ ರಾಕೇಶ್ ಕುಂಜೂರು ಹೇಳಿದರು.

ಕಾಪು ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಕಂದಾಯ ಜಿಲ್ಲೆಗಳ 68 ಘಟಕಗಳ ಮೂಲಕ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಇದರಲ್ಲಿ ಸುಮಾರು 376 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಲಾ 2000/- ರೂ. ಗಳಂತೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತದೆ.

ಜೇಸಿಐ ಇಂಡಿಯಾ ಫೌಂಡೇಷನ್ ನಿರ್ದೇಶಕ ವೈ. ಸುಕುಮಾರ್ ಮಾತನಾಡಿ, ಜೇಸಿಐ ಭಾರತದ ಪ್ರಧಾನ ಅಂಗ ಸಂಸ್ಥೆಯಾಗಿರುವ ಜೇಸಿಐ ಇಂಡಿಯಾ ಫೌಂಡೇಶನ್ ಮೂಲಕ ದೇಶದ 25 ವಲಯಗಳಿಂದ ಬಂದಿರುವ 5,000ಕ್ಕೂ ಅಧಿಕ ಅರ್ಜಿಗಳನ್ನು ಪರಿಶೀಲಿಸಿ 1788 ವಿದ್ಯಾರ್ಥಿಗಳಿಗೆ 36.76 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಇದರಲ್ಲಿ ವಲಯ 15ಕ್ಕೆ ಅತೀ ಹೆಚ್ಚು ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

2018ನೇ ಸಾಲಿನಲ್ಲಿ ವಲಯ 15ರಲ್ಲಿ 70ಕ್ಕೂ ಅಧಿಕ ಘಟಕಗಳ ಮೂಲಕ 2500 ಸದಸ್ಯರು ಜೇಸಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಈ ವರ್ಷ 18 ಹೊಸ ಘಟಕಗಳ ಸ್ಥಾಪನೆಯಾಗಿದ್ದು, ಜೇಸಿಐ ಇಂಡಿಯಾ ಫೌಂಡೇಶನ್‍ಗೆ 13 ಲಕ್ಷ ರೂ. ಗೂ ಮಿಕ್ಕ ದೇಣಿಗೆಯನ್ನು ನೀಡಲಾಗಿದೆ. 250ಕ್ಕೂ ಅಧಿಕ ಇಂಪ್ಯಾಕ್ಟ್ 2030 ಕಾರ್ಯಕ್ರಮಗಳು, 2000ಕ್ಕೂ ಅಧಿಕ ತರಬೇತಿ ಕಾರ್ಯಕ್ರಮಗಳು 1500 ಕ್ಕೂ ಅಧಿಕ ಸಾರ್ವಜನಿಕ ಸಂಪರ್ಕ ಯೋಜನೆಗಳು ಅನುಷ್ಟಾನಗೊಂಡಿವೆ. ಜೇಸಿ ನಿಲಯ, ಬಸ್ ನಿಲ್ದಾಣ, ಸುಜಲ್ ಕುಡಿಯುವ ನೀರಿನ ಕೊಡುಗೆ, ಸುರಕ್ಷಾ ನ್ಯಾಪ್‍ಕಿನ್ ಬರ್ನಿಂಗ್ ಮೆಶಿನ್, ಸಮಾಧಾನ್ ಶೌಚಾಲಯಗಳ ಕೊಡುಗೆ, ಅಪಘಾತ ನಿಯಂತ್ರಣಕ್ಕಾಗಿ ಪೊಲೀಸ್ ಬ್ಯಾರಿಕೇಡ್ ಕೊಡುಗೆ, ವ್ಯವಹಾರ ವಿಭಾಗದಲ್ಲಿ ಬಿ2ಬಿ ತರಬೇತಿ ಕಾರ್ಯಕ್ರಮ, ಶಾಂತಿ ಸ್ಥಾಪನೆಗೆ ಕರ್ನಾಟಕದಾದ್ಯಂತ ರ್ಯಾಲಿ, 3000ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಣೆ, 2000 ಕ್ಕೂ ಅಧಿಕ ಮಂದಿಯಿಂದ ನೇತ್ರದಾನ ವಾಗ್ದಾನ ಕಾರ್ಯಕ್ರಮ ಸಹಿತವಾಗಿ ನೂರಾರು ಕಾರ್ಯಕ್ರಮಗಳು ನಮ್ಮ ವಲಯದಲ್ಲಿ ಮೂಡಿ ಬಂದಿವೆ ಎಂದು ವಲಯಾಧ್ಯಕ್ಷ ರಾಕೇಶ್ ಕುಂಜೂರು ತಿಳಿಸಿದರು. 

ಅಕ್ಟೋಬರ್ 20-21ರಂದು ವಲಯ ಸಮ್ಮೇಳನ : ಈ ಬಾರಿಯ ಜೇಸಿಐನ ವಲಯ ಸಮ್ಮೇಳನ ಝೇಂಕಾರ -2018 ಜೇಸಿಐ ಕಟಪಾಡಿಯ ಆತಿಥ್ಯದಲ್ಲಿ ಉಡುಪಿ ಬಾಷೆಲ್ ಮಿಶನರಿ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ವಿವಿಧ ಪ್ರಶಸ್ತಿ, ಪುರಸ್ಕಾರ, ಮನ್ನಣೆಗಳ ಘೋಷಣೆ ನಡೆಯಲಿದ್ದು, ವಲಯದ ಸುಮಾರು 2000ಕ್ಕೂ ಅಧಿಕ ಜೇಸಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪತ್ರಿಕಾಗೋಷ್ಠಿಯಲ್ಲಿ ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ. ಸುಕುಮಾರ್, ನಿಕಟಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News