ಅಂಡಮಾನ್‌ನ ಜನತೆಗೆ ನೆರವಾದ ವಾಯುಪಡೆಯ ಡಾರ್ನಿಯರ್ ವಿಮಾನ ಸೇವೆ

Update: 2018-09-26 14:13 GMT

ಪೋರ್ಟ್‌ಬ್ಲೇರ್, ಸೆ.26: ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಜನತೆಗೆ ಲಭ್ಯವಿರುವ ಡಾರ್ನಿಯರ್ ವಿಮಾನಸೇವೆಯ ಮೂಲಕ ಭಾರತೀಯ ವಾಯುಪಡೆ ಕಳೆದ 2 ವರ್ಷಗಳಲ್ಲಿ 6,200 ಪೌರರ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ.

ಜನರ ಪ್ರಯಾಣಕ್ಕೆ ವಾಯುಪಡೆಯ ವಿಮಾನಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಆದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮುದಾಯದ ಜನರಿಗೆ ವಿಶೇಷ ಸವಲತ್ತು ಒದಗಿಸಲಾಗಿದೆ. ದ್ವೀಪಸಮುದಾಯದ ದುರ್ಗಮ ಒಳಪ್ರದೇಶಗಳ ಜನತೆಗೆ ವಾರಕ್ಕೆ ಎರಡು ಬಾರಿ, ಪ್ರತೀ ಸೋಮವಾರ ಮತ್ತು ಶುಕ್ರವಾರ ವಾಯುಪಡೆಯ ಡಾರ್ನಿಯರ್ 228 ವಿಮಾನದ ಮೂಲಕ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮುದಾಯದ ರಾಜಧಾನಿ ಪೋರ್ಟ್‌ಬ್ಲೇರ್‌ನಿಂದ ದೂರದ ದಕ್ಷಿಣಭಾಗದ ದ್ವೀಪಗಳಾದ ಕಾರ್ ನಿಕೋಬಾರ್ ಮತ್ತು ಕ್ಯಾಂಪ್‌ಬೆಲ್ ಕೊಲ್ಲಿಗೆ ಜನರು ಪ್ರಯಾಣಿಸುತ್ತಾರೆ . ವಾಹನ ಸಂಚಾರ ವ್ಯವಸ್ಥೆಗೆ ತೊಡಕಾಗಿರುವ ಈ ಪ್ರದೇಶಗಳಲ್ಲಿ ರೋಗಿಗಳನ್ನು, ಅಸ್ವಸ್ಥರನ್ನು, ವೃದ್ಧರನ್ನು ಆಸ್ಪತ್ರೆಗಳಿಗೆ ದಾಖಲಿಸಲು ಡಾರ್ನಿಯರ್ ಸೇವೆ ಅನುಕೂಲವಾಗಿದೆ. ಪೋರ್ಟ್‌ಬ್ಲೇರ್, ಕಾರ್ ನಿಕೊಬಾರ್ ಮತ್ತು ಕ್ಯಾಂಪ್‌ಬೆಲ್ ಕೊಲ್ಲಿಯ ಮಧ್ಯೆ ಡಾರ್ನಿಯರ್ 228 ವಿಮಾನಸಂಚಾರ ಸೇವೆಗೆ 2016ರ ಆಗಸ್ಟ್‌ನಲ್ಲಿ ರಕ್ಷಣಾ ಇಲಾಖೆ ಅನುಮೋದನೆ ನೀಡಿತ್ತು.

ಪೋರ್ಟ್‌ಬ್ಲೇರ್‌ನಿಂದ ಕಾರ್ ನಿಕೋಬಾರ್ ಹಾಗೂ ಕ್ಯಾಂಪ್‌ಬೆಲ್ ಕೊಲ್ಲಿ ಅನುಕ್ರಮವಾಗಿ 250 ಕಿ.ಮೀ. ಮತ್ತು 500 ಕಿ.ಮೀ ದೂರವಿದೆ. ಡಾರ್ನಿಯರ್ ಸೇವೆಯ ಜೊತೆಗೆ ಹಡಗು (ವಾರಕ್ಕೆ ಎರಡು ದಿನ) ಹಾಗೂ ಪವನ್ ಹನ್ಸ್ ಹೆಲಿಕಾಪ್ಟರ್‌ಗಳು(ಪ್ರತೀ ದಿನ) ಇಲ್ಲಿನ ಜನತೆಗೆ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News