ಹಿ.ಪ್ರದೇಶ: ಪ್ರತಿಕೂಲ ಹವಾಮಾನದಿಂದ ಸಿಕ್ಕಿಹಾಕಿಕೊಂಡಿದ್ದ 300 ಜನರ ರಕ್ಷಣೆ

Update: 2018-09-26 14:38 GMT

ಶಿಮ್ಲಾ,ಸೆ.26: ಪ್ರತಿಕೂಲ ಹವಾಮಾನದಿಂದಾಗಿ ಹಿಮಾಚಲ ಪ್ರದೇಶದ ಲಹಾಲ್ ಮತ್ತು ಸ್ಪಿತಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 300 ಜನರನ್ನು ಬುಧವಾರ ರಕ್ಷಿಸಲಾಗಿದೆ. ಹೊಸದಾಗಿ ಹಿಮಪಾತದಿಂದಾಗಿ ಸಂಚಾರ ತಡೆಯಾಗಿದ್ದ ರಾಜ್ಯದಲ್ಲಿಯ 600 ರಸ್ತೆಗಳ ಪೈಕಿ ಚಂಡಿಗಡ-ಮನಾಲಿ ರಸ್ತೆ ಸೇರಿದಂತೆ ಹೆಚ್ಚಿನವುಗಳನ್ನು ಸುಗಮಗೊಳಿಸಲಾಗಿದೆ. ಇದೇ ವೇಳೆ ಇನ್ನೂ ಸುಮಾರು 200 ಜನರು ಅಲ್ಲಿ ಅತಂತ್ರರಾಗಿದ್ದಾರೆ.

 ಗಡಿ ರಸ್ತೆ ಸಂಸ್ಥೆ(ಬಿಆರ್‌ಒ)ಯು ಹೆಚ್ಚಿನ ಜನರನ್ನು ರಕ್ಷಿಸಿದ್ದು,ಭಾರತೀಯ ವಾಯುಪಡೆಯು ತನ್ನ ಹೆಲಿಕಾಪ್ಟರ್‌ಗಳ ಮೂಲಕ 13 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೋಕ್ಸರ್ ಮತ್ತು ಬಾರಾಲಚಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ರಕ್ಷಿಸಲು ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದರು.

ಹವಾಮಾನವು ಈಗ ಸಹಜ ಸ್ಥಿತಿಗೆ ಮರಳಿದ್ದು,ಬಿಆರ್‌ಒ ಸಿಬ್ಬಂದಿ ರಸ್ತೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ರಸ್ತೆಗಳು ಗುರುವಾರ ಬೆಳಿಗ್ಗೆ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿವೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News