ಉಡುಪಿ: ಆರ್‌ಆರ್‌ಸಿಯಲ್ಲಿ ಪಂಚವಾದ್ಯ ವಾದನ ದಾಖಲೀಕರಣ

Update: 2018-09-26 14:53 GMT

ಉಡುಪಿ, ಸೆ.26: ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜುಕೇಶನ್ ಮಣಿಪಾಲ ಇದರ ಆಶ್ರಯದಲ್ಲಿ ಜಾನಪದ ವಾದನದ ದಾಖಲೀಕರಣ ಇತ್ತೀಚೆಗೆ ಇಲ್ಲಿ ನಡೆಯಿತು.

ಆಗಮೋಕ್ತ ದೇವಾಲಯಗಳಲ್ಲಿ ಪ್ರತಿನಿತ್ಯ ಪೂಜೆ, ಬಲಿಗಳಲ್ಲಿ ಮತ್ತು ಉತ್ಸವಗಳಲ್ಲಿ ತಂತ್ರಾಗಮ ಶಾಸ್ತ್ರ ರೀತ್ಯಾ ನೇರವೇರುವ ಬಲಿಗಳಲ್ಲಿ ಪ್ರಧಾನ ವಾಗಿ ಇರಲೇಬೇಕಾದ ಪಟಾಂ(ಪಟಹ)ಗಳ ಪ್ರತ್ಯೇಕ- ಸಂಯೋಜಿತ ನಿವಹರ್ಣೆಗಳ ದಾಖಲೀಕರಣ ನಡೆಯಿತು.

ಈ ದಾಖಲೀಕರಣವನ್ನು ಕಾಪು ಮಹತೋಭಾರ ಶ್ರೀಲಕ್ಷ್ಮೀಜನಾರ್ದನ ದೇವಾಲಯದ ಪಂಚವಾದ್ಯ ನುಡಿಸುವ ಹಿರಿಯ ಕಲಾವಿದರಾದ ಕಾಪುವಿನ ತೊಂಬತ್ತರ ಹರೆಯದ ನಾರಾಯಾಣ ದೇವಾಡಿಗ ಕಾಪು, ಎಪ್ಪತ್ತರ ಹರೆಯದ ನಾರಾಯಣ ಶೇರಿಗಾರ ಕಾಪು ಇವರೀರ್ವರು ನಡೆಸಿಕೊಟ್ಟರು.

ಪಟಹ- ದೋಲು ಗಂಟೆಗಳ ವಾದನ ಮತ್ತು ತಂತ್ರಿಗಳು ತಂತ್ರ ತೂಗುವ ಅಪೂರ್ವ ಸಂದರ್ಭಗಳ ಕುರಿತಾದ, ಅವುಗಳ ಸಂಯುಕ್ತ ಪ್ರಯೋಗಗಳು, ನಿಖರತೆ ಮತ್ತು ಶಾಸ್ತ್ರೀಯತೆಯನ್ನು ಗುರುತಿಸಲಾಗಿದೆ, ದಾಖಲಿಸಿಕೊಳ್ಳಲಾಗಿದೆ. ಮುಂದಿನ ತಲೆಮಾರಿಗೆ ಪ್ರದರ್ಶಿಸಲು ಹಾಗೂ ಅಧ್ಯಯನಕ್ಕೆ ಈ ದಾಖಲಾತಿ ಉಪಯೋಗವಾಗಲಿದೆ ಎಂದು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಹೇಳಿದರು.

ದಾಖಲೀಕರಣವನ್ನು ನಡೆಸಿಕೊಟ್ಟ ಕಲಾವಿದರಾದ ಕಾಪುವಿನ ನಾರಾಯಣ ದೇವಾಡಿಗ ಕಾಪು, ನಾರಾಯಣ ಶೇರಿಗಾರ ಕಾಪು ಇವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ದಾಖಲಾತಿಯನ್ನು ಹಿರಿಯ ಪತ್ರಕರ್ತ ಜನಪದ ತಜ್ಞ ಕೆ.ಎಲ್.ಕುಂಡಂತಾಯ ನಿರ್ವಹಿಸಿದರು. ಆರ್‌ಆರ್‌ಸಿಯ ಲಚ್ಚೇಂದ್ರ, ಭಾರತಿ ದಾಖಲಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News