ಯುಪಿಸಿಎಲ್: ಎಲ್ಲೂರು ಗ್ರಾಪಂಗೆ 1.45 ಕೋಟಿ ರೂ. ಅನುದಾನ

Update: 2018-09-26 15:09 GMT

ಪಡುಬಿದ್ರಿ, ಸೆ. 26: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಅದಾನಿ ಸಮೂಹದ ಯುಪಿಸಿಎಲ್ ಸಂಸ್ಥೆ, ಎಲ್ಲೂರು ಗ್ರಾಪಂಗೆ 2018-19ನೇ ವಾರ್ಷಿಕ ಸಾಲಿನಲ್ಲಿ ಸಿಎಸ್‌ಆರ್ ಅನುದಾನದಡಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲು 1.45 ಕೋಟಿ ರೂ.ಗಳ ಧೃಢೀಕರಣ ಪತ್ರವನ್ನು ಮಂಗಳವಾರ ಇಲ್ಲಿ ಹಸ್ತಾಂತರಿಸಿತು.

ಎಲ್ಲೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗ್ರಾಪಂ ಸದಸ್ಯರ ಉಪಸ್ಥಿತಿಯಲ್ಲಿ ಎಲ್ಲೂರು ಗ್ರಾಪಂ ಅಧ್ಯಕ್ಷೆ ವಸಂತಿ ಮಧ್ವರಾಜ್ ಅವರಿಗೆ ಯುಪಿಸಿಎಲ್ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಕಿಶೋರ್ ಆಳ್ವ ಅವರು 2018-19ನೇ ವಾರ್ಷಿಕ ಸಾಲಿನ ಕ್ರಿಯಾಯೋಜನೆಯಲ್ಲಿ ನಮೂದಿಸಿರುವ ಅಭಿವೃದ್ಧಿ ಹೊಂದಬೇಕಾದ ವಿವಿಧ ಕಾಮಗಾರಿಗಳನ್ನು ಅದಾನಿ ಯುಪಿಸಿಎಲ್ ಸಿಎಸ್‌ಆರ್ ಅನುದಾನದಡಿಯಲ್ಲಿ ನಿರ್ವಹಿಸಲು ಒಪ್ಪಿಗೆ ಸೂಚಿಸುವ ಧೃಢೀಕರಣ ಪತ್ರವನ್ನು ಸಂಸ್ಥೆಯ ಪರವಾಗಿ ನೀಡಿದರು.

ಬಳಿಕ ಮಾತನಾಡಿದ ಕಿಶೋರ್ ಆಳ್ವ, ಯುಪಿಸಿಎಲ್ 3 ವರ್ಷಗಳ ಅವಧಿಗೆ ಯೋಜನಾ ಪ್ರದೇಶದ ಸುತ್ತಮುತ್ತಲಿನ 7 ಗ್ರಾಪಂಗಳಿಗೆ ಒಟ್ಟು 22.73 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸಿಎಸ್‌ಆರ್ ಯೋಜನೆಯಡಿ ನೀಡಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈ ಅನುದಾನವನ್ನು ಘೋಷಿಸಲಾಗಿದ್ದು, ಅದರಂತೆ ಎಲ್ಲೂರು ಗ್ರಾಪಂಗೆ ಈ ಅವಧಿಯಲ್ಲಿ ಒಟ್ಟು 3.75 ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳನ್ನು ಅದಾನಿ ಸಂಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

2016-17ನೇ ಸಾಲಿನಿಂದ ಈವರೆಗೆ ಘೋಷಿಸಿದ ಅನುದಾನದಡಿಯಲ್ಲಿ ಈಗಾಗಲೇ ಸುಮಾರು 1.88ಕೋಟಿ ರೂ. ವೆಚ್ಚದಲ್ಲಿ 10 ಅಭಿವೃದ್ಧಿ ಕಾಮಗಾರಿ ಗಳು ಪೂರ್ಣಗೊಂಡು ಗ್ರಾಮಸ್ಥರ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಗಿದೆ. ಇದರಲ್ಲಿ 500 ಮೀ.ಉದ್ದದ ಪಣಿಯೂರು-ದುರ್ಗಾನಗರ ರಸ್ತೆ ಕಾಂಕ್ರೀಟೀಕರಣ, 2500 ಮೀ. ಉದ್ದದ ಎಲ್ಲೂರು-ಕೆಮ್ಮೆಂಡಲು ರಸ್ತೆ ಡಾಮರೀಕರಣ, 880 ಮೀ. ಉದ್ದದ ಕೆಂಜಾ -ಮುದರಂಗಡಿ ರಸ್ತೆ ಅಭಿವೃದ್ಧಿ, 250 ಮೀ. ಉದ್ದದ ವೀರಭದ್ರ ರಸ್ತೆ, 350 ಮೀ. ಉದ್ದದ ಕಂಚುಗರಕೇರಿ ರಸ್ತೆ, 400 ಮೀ. ಉದ್ದದ ಕುಂಜೂರು ದೇವಾಸ್ಥಾನ ರಸ್ತೆ, 790 ಮೀ. ಉದ್ದದ ಕೇಂಜಾ-ಮಾಣಿಯೂರು ರಸ್ತೆ ಕಾಂಕ್ರೀಟೀಕರಣ, 255 ಮೀ. ಉದ್ದದ ಬೆಳ್ಳಿಬೆಟ್ಟು-ಆಲಡೆ ರಸ್ತೆ ಅಭಿವೃದ್ಧಿ, ಮುದರಂಗಡಿ ಪೇಟೆಯಿಂದ ತಜೆ ಮಸೀದಿ ತನಕ ರಸ್ತೆಯ ವಿದ್ಯುದ್ದೀಕರಣ, ಅದಮಾರು ಪೇಟೆಯಿಂದ ಕುಂಜೂರು ಶ್ರೀ ದುರ್ಗಾ ದೇವಸ್ಥಾನ ತನಕ ರಸ್ತೆಯ ವಿದ್ಯುತ್ ಕಾಮಗಾರಿಗಳು ಒಳಗೊಂಡಿವೆ ಎಂದು ಆಳ್ವ ವಿವರಿಸಿದರು.

2018-19ನೇ ಸಾಲಿನ ಸಿಎಸ್‌ಆರ್ ಕ್ರಿಯಾಯೋಜನೆ ಪತ್ರವನ್ನು ಆದಷ್ಟು ಬೇಗನೆ ನೀಡಬೇಕೆಂದು ಗ್ರಾಪಂಗೆ ಮನವಿ ಮಾಡಿದ ಆಳ್ವ, ಇದರಲ್ಲಿ ಸೇರಿರುವ 1.45 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಸಂಸ್ಥೆ ಅತೀ ಶೀಘ್ರವೇ ಕೈಗೆತ್ತಿ ಕೊಂಡು ಡಿಸೆಂಬರ್ ತಿಂಗಳ ಒಳಗೆ ಕಾಮಗಾರಿಗಳನ್ನು ಪೂರ್ಣ ಗೊಳಿಸ ಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ವಸಂತಿ ಮಧ್ವರಾಜ್ ಮಾತನಾಡಿ, ಯುಪಿಸಿಎಲ್ ಸಂಸ್ಥೆಗೆ ಗ್ರಾಪಂ ಪರವಾಗಿ ಅಭಿನಂದನೆ ಸಲ್ಲಿಸಿದರು. ಎಲ್ಲೂರು ಗ್ರಾಪಂ ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ, ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ, ಜಿಪಂ ಸದಸ್ಯೆ ಶಿಲ್ಪಜಿ. ಸುವರ್ಣ, ತಾಪಂ ಸದಸ್ಯ ಕೇಶವ ಮೊಯ್ಲಿ, ಪಂಚಾಯತ್ ಸದಸ್ಯರಾದ ಸದಾಶಿವ ಶೆಟ್ಟಿ, ರವಿರಾಜ ರಾವ್, ವಿಮಲಾ ದೇವಾಡಿಗ, ರಾಜೇಂದ್ರ, ಪೂರ್ಣಿಮಾ ಪ್ರಸಾದ್, ರಹೀಮ್ ಕುಂಜೂರು, ಲೀಲಾ ದೇವಾಡಿಗ, ಮೋಹನ ಆಚಾರ್ಯ, ವಸಂತಿ, ವಾಣಿ, ಪುಷ್ಪಾ, ಯುಪಿಸಿಎಲ್ ಸಂಸ್ಥೆಯ ಅಧಿಕಾರಿಗಳಾದ ಗಿರೀಶ್ ನಾವಡ, ರವಿ ಆರ್ ಜೇರೆ, ವಿನೀತ್ ಆಂಚನ್, ಸುಖೇಶ್ ಸುವರ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News