ಆಳ್ವಾಸ್‍ನಲ್ಲಿ ಬೇಂದ್ರೆ ಕಾವ್ಯ ಕಮ್ಮಟ

Update: 2018-09-26 15:13 GMT

ಮೂಡುಬಿದಿರೆ, ಸೆ. 26: ಬೇಂದ್ರೆಯವರ ಚಿಂತನೆಗಳು ಸರ್ವಕಾಲಕ್ಕೂ ಅನ್ವಯವಾಗುವಂತಹದು. ಇವರ ಬದುಕು ಬೇರೆಯಲ್ಲ, ಕಾವ್ಯ ಬೇರೆಯಲ್ಲ. ಒಲವೇ ನಮ್ಮ ಬದುಕು ಎಂಬ ನುಡಿಯು ಇವರ ಸಮಗ್ರ ಕಾವ್ಯಗಳಿಗೆ ಅನ್ವಯಿಸುತ್ತದೆ. ಜನ ಕವಿಯಾಗಿ, ಆಡು ನುಡಿಯನ್ನು ಕಾವ್ಯ ನುಡಿಯನ್ನಾಗಿಸಿ ಅರ್ಥ ಪೂರ್ಣವಾದ ಯಶಸ್ವಿ ಕಾವ್ಯಗಳನ್ನು ನೀಡಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ. ನಾಗಪ್ಪ ಗೌಡ ಆರ್ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೇಂದ್ರೆ ಟ್ರಸ್ಟ್ ಧಾರವಾಡ ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜು ಕನ್ನಡ ವಿಭಾಗ ಐ.ಕ್ಯೂ.ಎ.ಸಿಯ ಜಂಟಿ ಆಶ್ರಯದಲ್ಲಿ ನಡೆದ "ಬೇಂದ್ರೆ ಕಾವ್ಯ ಕಮ್ಮಟ"ವನ್ನು ಉದ್ಘಾಟಿಸಿ ಮಾತನಾಡಿದರು. 

ಬೇಂದ್ರೆಯವರು ಬದುಕಿನ ಅರ್ಥವನ್ನು ಕವಿತೆಯ ರೂಪದಲ್ಲಿ ಮನುಕುಲಕ್ಕೆ ಅನ್ವಯಿಸುವಂತೆ ರಚಿಸಿದ್ದಾರೆ.  ಪ್ರಸ್ತುತ ಕಾಲಘಟ್ಟದಲ್ಲಿ ಹಣ ಮತ್ತು ಅಧಿಕಾರಗಳು ಜೀವನದ ಮೂಲ ಗುರಿಯಾಗಿದ್ದು, ಒಲವು ಮತ್ತು ಸೌಹಾರ್ದತೆಗಳು ತನ್ನ ಮೌಲ್ಯವನ್ನು  ಕಳೆದುಕೊಳ್ಳುತ್ತಿದೆ. ಬದುಕನ್ನು ನೋಡುವ ದೃಷ್ಟಿ ಬದಲಾಗಿಸಿ, ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ನಗುವನ್ನು ಕಳೆದುಕೊಂಡು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು. 

ಹಿರಿಯ ಸಾಹಿತಿ ಶ್ಯಾಮಸುಂದರ ಬಿದಿರಕುಂದಿ ಮಾತನಾಡಿ ಬೇಂದ್ರೆಯವರ ಕವಿತೆಗಳಲ್ಲಿ ಮನೋರಂಜನೆಯ ಜೊತೆಗೆ ಜೀವನದ ಕಟು ಸತ್ಯಗಳನ್ನು ತಿಳಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಹುಟ್ಟೂರಿಗೆ ಹೋಗಿ ಕಾವ್ಯೋದ್ಯೋಗ ಮಾಡಿ ಯಶಸ್ವಿಯಾದವರು ಬೇಂದ್ರೆ ಎಂದು  ತಿಳಿಸಿದರು. 

ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಅಧ್ಯಕ್ಷತೆಯನ್ನು ವಹಿಸಿದ್ದರು.  ಇದೇ ಸಂದರ್ಭದಲ್ಲಿ ರಂಗಭೂಮಿ ಮತ್ತು ಕಿರುತೆರೆಯ ಕಲಾವಿದ ಅನಂತ ದೇಶಪಾಂಡೆ ಬೇಂದ್ರೆಯವರ ಬದುಕಿನ ಚಿತ್ರಣವನ್ನು ಅಭಿನಯಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ  ಪ್ರೊ. ಚಂದ್ರಶೇಖರ ಗೌಡ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಗತಿ ವಂದಿಸಿ, ದಿಶಾ ಶೆಟ್ಟಿ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News