×
Ad

ಪೌರ ಕಾರ್ಮಿಕರ ಬಗ್ಗೆ ಕೀಳರಿಮೆ ಸರಿಯಲ್ಲ: ರಘುಪತಿ ಭಟ್

Update: 2018-09-27 17:42 IST

ಉಡುಪಿ, ಸೆ.27: ಪೌರ ಕಾರ್ಮಿಕರಿಲ್ಲದೆ ನಗರಸಭೆ ನಡೆಯಲು ಸಾಧ್ಯವಿಲ್ಲ. ಉಡುಪಿ ನಗರಸಭೆಗೆ ಸ್ವಚ್ಛತೆ ಸಂಬಂಧ ದೊರೆತ ಪ್ರಶಸ್ತಿಗಳಿಗೆ ಪೌರ ಕಾರ್ಮಿಕರು ಮೂಲ ಕಾರಣಕರ್ತರು. ಗೌರವಯುತವಾದ ವೃತ್ತಿ ನಡೆಸುತ್ತಿರುವ ಪೌರ ಕಾರ್ಮಿಕರ ಕುರಿತ ಕೀಳರಿಮೆ ತೊರೆಯಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ನಗರಸಭೆ ವತಿಯಿಂದ ಅಜ್ಜರಕಾಡು ಪುರಭವನದ ಮಿನಿ ಹಾಲ್ ನಲ್ಲಿ ಗುರುವಾರ ಆಯೋಜಿಸಲಾದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ನಗರಸಭೆಯಲ್ಲಿ 194 ಖಾಯಂ ಪೌರ ಕಾರ್ಮಿಕರು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಉಡುಪಿ ನಗರವನ್ನು ಸ್ವಚ್ಛವಾಗಿ ಇಡುವ ಜವಾಬ್ದಾರಿ ಪೌರ ಕಾರ್ಮಿಕರದ್ದಾಗಿದೆ. ನಮ್ಮ ಉಡುಪಿ ಸ್ವಚ್ಛ ಉಡುಪಿ ನಮ್ಮ ಗುರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರ ಕಾರ್ಮಿಕರಾದ ರಾಜು, ರಂಗ, ಕೃಷ್ಣ, ಪುಷ್ಪಾ, ರುಕ್ಸನಾ ಫಾತಿಮಾ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಸಿ.ಎಸ್.ಚಂದ್ರಶೇಖರ್ ಆರೋಗ್ಯದ ಕುರಿತು ಪೌರ ಕಾರ್ಮಿಕರಿಗೆ ಮಾಹಿತಿ ನೀಡಿದರು.

ಉದ್ಯಮಿ ಜೆರ್ರಿ ವಿನ್ಸೆಂಟ್, ಉಡುಪಿ ಪೌರಾಯುಕ್ತ ಜನಾರ್ದನ ಜಿ.ಸಿ., ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣೇಶ್ ಕೆ., ಪರಿಸರ ಅಭಿ ಯಂತರ ರಾಘವೇಂದ್ರ ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ ವಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕೌಂಟ್ಸ್ ಸುಪರಿಂಡೆಂಟ್ ಗಾಯತ್ರಿ ಯು.ವಿ. ಕಾರ್ಯಕ್ರಮ ನಿರೂಪಿಸಿದರು.

25 ಪೌರಕಾರ್ಮಿಕರ ಖಾಯಂ
ಉಡುಪಿ ನಗರಸಭೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಲ್ಲಿ 25 ಮಂದಿಯನ್ನು ಈ ವರ್ಷ ಸರಕಾರದ ಆದೇಶದಂತೆ ಖಾಯಂ ಗೊಳಿಸಲಾಗಿದೆ. ಶುಚಿತ್ವದ ಬಗ್ಗೆ ತರಬೇತಿಗಾಗಿ ನಗರಸಭೆಯ ಪೌರ ಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸಿಕೊಡಲಾಗಿದೆ ಎಂದು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ ವಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News