×
Ad

ಹಾಸ್ಟೆಲ್ ಮಕ್ಕಳ ಸಂಖ್ಯಾನುಗುಣವಾಗಿ ಸಿಬ್ಬಂದಿಗಳ ನೇಮಕ: ನಿತ್ಯಾನಂದ ಸ್ವಾಮಿ ಆಗ್ರಹ

Update: 2018-09-27 17:43 IST

ಉಡುಪಿ, ಸೆ. 27: ರಾಜ್ಯದ ಹಲವು ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಮಕ್ಕಳ ಸಂಖ್ಯೆಗಳಿಗೆ ಅನುಗುಣವಾಗಿ ಸಿಬ್ಬಂದಿಗಳ ನೇಮಕಾತಿ ಮಾಡಿ ಕೊಳ್ಳುವ ನಿಟ್ಟಿನಲ್ಲಿ ಸರಕಾರ ಸಿಬ್ಬಂದಿಗಳ ಸಂಖ್ಯೆಯನ್ನು ಪುನರ್ ಪರಿಶೀಲನೆ ಮಾಡಬೇಕು. ಬಳಿಕ ಹೆಚ್ಚುವರಿ ಹುದ್ದೆಗಳನ್ನು ತುಂಬುವ ಕೆಲಸ ಮಾಡ ಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ತಿಳಿಸಿದ್ದಾರೆ.

ಉಡುಪಿ ಅಜ್ಜರಕಾಡುವಿನಲ್ಲಿರುವ ಎಲ್ಐಸಿ ನೌಕರರ ಸಂಘದ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾ ಮಟ್ಟದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಎಲ್ಲ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರಿಗೆ ಇಲಾಖೆಯಿಂದ ವೇತನ ನೀಡಬೇಕು. ಎಲ್ಲ ಹಾಸ್ಟೆಲ್ ಗಳಿಗೆ ಕಾವಲುಗಾರರನ್ನು ನೇಮಕ ಮಾಡಬೇಕು. ಹೊರಗುತ್ತಿಗೆ ನೌಕರರಿಗೆ ಕಳೆದ ಮೂರು ತಿಂಗಳುಗಳಿಂದ ಬಾಕಿ ಇರಿಸಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಮಿಕ ಕಾನೂನುಗಳ ಪ್ರಕಾರ ನೌಕರರಿಗೆ ವಾರದ ರಜೆ, ಓವರ್ ಟೈಮ್ ಕೆಲಸಕ್ಕೆ ಹಾಗೂ ಹಬ್ಬ ಹರಿದಿನಗಳ ಎರಡು ಪಟ್ಟು ವೇತನ ನೀಡಬೇಕು. ನಿವೃತ್ತಿ ವಯಸ್ಸು ತಲುಪುವವರೆಗೆ ಸೇವಾ ಭದ್ರತೆ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಅವರು ಹೇಳಿದರು.

ಸಂಘಟನೆಯ ಬಲದಿಂದ ಮಾತ್ರ ಹೊರಗುತ್ತಿಗೆ ನೌಕರರಿಗೆ ನ್ಯಾಯ ದೊರೆಯಲು ಸಾಧ್ಯ. ನೀವು ಗಟ್ಟಿಗೊಳಿಸುವ ಸಂಘವು ನಿಮ್ಮನ್ನು ಶಾಶ್ವತವಾಗಿ ಕಾಪಾಡುತ್ತದೆ. ಅನ್ಯಾಯಕ್ಕೆ ಒಳಗಾದ ನೌಕರರಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ಸಂಘದ ಮೇಲಿದೆ. ಆ ನಿಟ್ಟಿನಲ್ಲಿ ಹೋರಾಟ ನಡೆಸಲಾುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಮುಖಂಡ ಗಜಾನನ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಕಾರ್ಯದರ್ಶಿ ಹನುಮೆಗೌಡ ಬೆಂಗಳೂರು, ದ.ಕ. ಜಿಲ್ಲಾ ಅಧ್ಯಕ್ಷ ಭುವನೇಶ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಜಿಲಾ್ಲ ನಾಯಕಿ ಪ್ರೇಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News