×
Ad

ಮಲ್ಪೆಯಲ್ಲಿ ಪ್ಯಾರಾ ಬೀಚ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

Update: 2018-09-27 17:47 IST

ಮಲ್ಪೆ, ಸೆ.27: ಭಾರತೀಯ ಪ್ಯಾರಾಲಿಂಪಿಕ್ಸ್ ವಾಲಿವಾಲ್ ಒಕ್ಕೂಟ ಮತ್ತು ರಾಜ್ಯ ಅಂಗವಿಕಲರ ವಾಲಿಬಾಲ್ ಸಂಸ್ಥೆ ಸಹಯೋಗದಲ್ಲಿ ಮಲ್ಪೆ ಬೀಚ್‌ನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಪ್ಯಾರಾ ಬೀಚ್ ವಾಲಿಬಾಲ್ ಸೀನಿಯರ್ ಸ್ಟಾಂಡಿಂಗ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಗುರುವಾರ ಮಲ್ಪೆ ಕಲ ಕಿನಾರೆಯಲ್ಲಿ ಚಾಲನೆ ನೀಡಲಾಯಿತು.

ಪಂದ್ಯಾಟದಲ್ಲಿ ಕರ್ನಾಟಕ, ಗೋವ, ಕೇರಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರ್‌ಖಂಡ್, ರಾಜಸ್ತಾನ, ಹರ್ಯಾಣ, ಪಶ್ಚಿಮ ಬಂಗಾಲ, ಜಾರ್ಖಂಡ್ ರಾಜ್ಯದ ಒಟ್ಟು 12 ತಂಡಗಳ 150 ಕ್ರೀಡಾ ಪಟುಗಳು ಭಾಗವಹಿಸಿದ್ದಾರೆ.

ಇಂದು ಐದು ನಾಕ್‌ಔಟ್ ಪಂದ್ಯಾಟ ಜರಗಿದ್ದು, ಸೆ.28ರಂದು ಲೀಗ್ ಪಂದ್ಯಾಟಗಳು ನಡೆಯಲಿವೆ. ಅಂತಿಮ ದಿನ ಸೆ.29ರಂದು ಸೆಮಿಪೈನಲ್ ಮತ್ತು ಫೈನಲ್ ಪಂದ್ಯಾಟ ನಡೆಯಲಿವೆ. 16 ಮಂದಿ ಅಂಪೈರ್, ಐದು ಮಂದಿ ರೆಫ್ರಿ ಹಾಗೂ ಸ್ಕೋರರ್ ಮತ್ತು 16 ಮಂದಿ ಲೈನ್‌ಮೆನ್‌ಗಳು ಈ ಪಂದ್ಯಾಟ ದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅತ್ಯಂತ ಪ್ರಮುಖವಾಗಿರುವ ಈ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳನ್ನು 2019ರಲ್ಲಿ ಗೋವಾದಲ್ಲಿ ನಡೆಯಲಿರುವ ಅಂತಾ ರಾಷ್ಟ್ರೀಯ ಪ್ಯಾರ ಬೀಚ್ ವಾಲಿಬಾಲ್ ಪಂದ್ಯಾಟಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಮಲ್ಪೆಯಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಆಂಧ್ರ ಪ್ರದೇಶ, ತೆಲಂಗಾಣ, ಕೇರಳದಿಂದ ಮಹಿಳಾ ಕ್ರೀಡಾಪಟುಗಳು ಆಗಮಿಸಿದ್ದು, ಇವರಿಗೆ ಸ್ಪರ್ಧೆ ನಡೆಯುವುದಿಲ್ಲ. ಇವರಿಗೆ ಪಂದ್ಯ ನಡೆಸಿ ಉತ್ತಮ ಪ್ರದರ್ಶನ ನೀಡಿದವರನ್ನು ರಾಷ್ಟ್ರ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಪ್ಯಾರಾ ವಾಲಿಬಾಲ್ ಒಕ್ಕೂಟದ ಅಧ್ಯಕ್ಷ ಎಚ್.ಚಂದ್ರಶೇಖರ್ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭ: ಪಂದ್ಯಾಟವನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಪಾಲ್ ಸುವರ್ಣ ಶುಭಹಾರೈಸಿದರು.

ಒಕ್ಕೂಟದ ಅಧ್ಯಕ್ಷ ಎಚ್.ಚಂದ್ರಶೇಖರ್, ನಗರಸಭೆ ಪೌರಾಯುಕ್ತ ಜನಾರ್ದನ್, ರಶ್ಮಿ ನಾರಾಯಣ್, ಒಕ್ಕೂಟದ ರಂಜಿತ್ ಮಾರ್ಟಿನ್, ಉದಯ ಕುಮಾರ್ ಶೆಟ್ಟಿ, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ಸುದೇಶ್ ಶೆಟ್ಟಿ, ಅಂತಾ ರಾಷ್ಟ್ರೀಯ ಕ್ರೀಡಾಪಟುಗಳಾದ ಬಾಬು ಶೆಟ್ಟಿ, ನಾಗಣ್ಣ, ಮಂಜುಕೊಳ, ನಿರ್ಮಿತಿ ಕೇಂದ್ರದ ಅರುಣ್‌ಕುಮಾರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋನ್‌ಕುಮಾರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News